ಆನೇಕಲ್, ಏ 10 (DaijiworldNews/DB): ಎರಡು ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಆಕೆಯ ಸಾವಿಗೆ ಕಾರಣನಾಗಿ ಬಂಧಿತನಾಗಿದ್ದ ಮೃತ ಮಗುವಿನ ದೊಡ್ಡಪ್ಪ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅತ್ತಿಬೆಲೆ ನೆರಳೂರಿನ ನಿವಾಸಿ ದೀಪು (31) ಆತ್ಮಹತ್ಯೆಗೆ ಶರಣಾದವನು. ತನ್ನ ತಮ್ಮನ ಎರಡು ವರ್ಷದ ಹೆಣ್ಣು ಮಗುವಿನ ಮೇಲೆ ಈತ ಅತ್ಯಾಚಾರ ಎಸಗಿ ಆಕೆಯ ಸಾವಿಗೆ ಕಾರಣನಾಗಿದ್ದ ಈತನನ್ನು ಮಾ.28ರಂದು ಪೋಕ್ಸೋ ಕಾಯ್ದೆಯಡಿ ಅತ್ತಿಬೆಲೆ ಪೊಲೀಸರು ಬಂಧಿಸಿದ್ದರು. ಬಳಿಕ ಆತನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಇದೀಗ ಶನಿವಾರ ಮುಂಜಾನೆ 5.25ಕ್ಕೆ ಸ್ನಾನದ ಕೋಣೆಯಲ್ಲಿ ಬೆಡ್ ಶೀಟ್ ಮೂಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತನ್ನ ಕಿರಿಯ ಸಹೋದರನ ಮಗಳನ್ನು ಬೇರೆ ಊರಿಗೆ ಕರೆದುಕೊಂಡು ಹೋಗಿ ಸ್ವಲ್ಪ ಸಮಯದ ಬಳಿಕ ತನ್ನ ಸ್ನೇಹಿತನೊಡಗೂಡಿ ಕಾರಿನಲ್ಲಿ ಮತ್ತೆ ಸಹೋದರನಿದ್ದಲ್ಲಿಗೆ ಕರೆ ತರುತ್ತಿದ್ದ. ಮಾರ್ಗಮಧ್ಯೆ ಸ್ನೇಹಿತನನ್ನು ಕಾರಿನಿಂದ ಇಳಿಸಿ ಮದ್ಯ ತರುವಂತೆ ಹೇಳಿ ಸ್ನೇಹಿತ ಇಳಿದು ಹೋದಾಗ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ. ಈತನ ಪೈಶಾಚಿಕ ಕೃತ್ಯದಿಂದ ಮಗು ಉಸಿರುಗಟ್ಟಿ ಮೃತಪಟ್ಟಿತ್ತು. ಮಗು ಉಸಿರಾಟ ನಿಲ್ಲಿಸಿದ್ದನ್ನು ನೋಡಿ ಆತಂಕಿತನಾಗಿ ಆಸ್ಪತ್ರೆಗೆ ತೆರಳಿದ್ದ. ಆದರೆ ಅದಾಗಲೇ ಮಗು ಮೃತಪಟ್ಟ ಕಾರಣ ಅತ್ತಿಬೆಲೆ ಪೊಲೀಸ್ ಠಾಣೆಗೆ ತೆರಳಿ ಬ್ರೇಕ್ ಹಾಕಿದ್ದರಿಂದ ತಲೆಗೆ ಪೆಟ್ಟಾಗಿ ಮಗು ಮೃತಪಟ್ಟಿದೆ ಎಂದು ಕತೆ ಕಟ್ಟಿದ್ದ. ಆತನ ನಡವಳಿಕೆಯಿಂದ ಸಂಶಯಗೊಂಡ ಪೊಲೀಸರು ಮಗುವಿನ ಮರಣೋತ್ತರ ಪರೀಕ್ಷೆ ಮಾಡಿದಾಗ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಸ್ಪಷ್ಟವಾಗಿತ್ತು.