ಹೊಸಪೇಟೆ,ಏ 09 (DaijiworldNews/HR): ಬಿಜೆಪಿಯ ನಾಯಕರುಗಳು ದೇಶಭಕ್ತರಲ್ಲ, ಅವರು ದ್ವೇಷ ಹರಡುವ ದ್ವೇಷ ಭಕ್ತರು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸರ್ಕಾರಕ್ಕೂ ಧರ್ಮಕ್ಕೂ ಸಂಬಂಧವಿಲ್ಲ. ಆದರೆ ಧರ್ಮದ ಹೆಸರಿನಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದ್ದು, ಭಾವನಾತ್ಮಕ ವಿಷಯಗಳ ಮೂಲಕ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದರು.
ಇನ್ನು ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ, ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಆದರೆ ಸರ್ಕಾರ ಆ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ವಿದೇಶಾಂಗ ನೀತಿ ನೆಲಕಚ್ಚಿದೆ. ನಮ್ಮ ಭೂಭಾಗವನ್ನು ಚೀನಾ ಅತಿಕ್ರಮಣ ಮಾಡಿದೆ. ಯುಕ್ರೇನ್-ರಷ್ಯಾ ಯುದ್ಧದ ಕುರಿತು ಸರ್ಕಾರ ತನ್ನ ನಿಲುವು ತಿಳಿಸಿಲ್ಲ ಎಂದು ಗುಡುಗಿದ್ದಾರೆ.