ಲಖನೌ, ಏ 08 (DaijiworldNews/HR): ವಿವಾದಾತ್ಮಕ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಆಶ್ರಮದ ಆವರಣದಲ್ಲಿ ನಿಲ್ಲಿಸಿದ್ದ ಕಾರ್ ಡಿಕ್ಕಿಯಲ್ಲಿ ಕೆಲವು ದಿನಗಳ ಹಿಂದೆ ಕಣ್ಮರೆಯಾಗಿದ್ದ 13 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಬಾಲಕಿಯು ಏಪ್ರಿಲ್ 5ರಿಂದ ನಾಪತ್ತೆಯಾಗಿದ್ದು, ಆಕೆಯ ಪೋಷಕರು ಮೂವರು ವ್ಯಕ್ತಿಗಳನ್ನು ಎಫ್ಐಆರ್ನಲ್ಲಿ ಹೆಸರಿಸಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಮಿಶ್ರಾ ತಿಳಿಸಿದ್ದಾರೆ.
ಇನ್ನು ಬಾಲಕಿಯ ಮೃತದೇಹವನ್ನು ಪೋಸ್ಟ್ ಮಾರ್ಟನ್ಗೆ ಕಳುಹಿಸಲಾಗಿದ್ದು, ಕೊಟ್ವಾಲಿ ಪ್ರದೇಶದ ಬೆಮೌರ್ ಗ್ರಾಮದ ಸಮೀಪ ಇರುವ ಅಸಾರಾಂ ಬಾಪು ಆಶ್ರಮದ ನೌಕರರನ್ನು ಪೊಲೀಸರು ಈಗಾಗಲೇ ವಿಚಾರಣೆಗೆ ಒಳಪಡಿಸುತ್ತಿದ್ದಾರೆ ಎಂದು ಸಂತೋಷ್ ಮಿಶ್ರಾ ಹೇಳಿದ್ದಾರೆ.
ಆಶ್ರಮದ ಆವರಣದ ನಿಲ್ಲಿಸಿದ್ದ ಕಾರಿನಿಂದ ವಾಸನೆ ಬರುತ್ತಿದ್ದು, ವಾಚ್ ಮ್ಯಾನ್ ಸುಮನ್ ಪಾಂಡೆ ಕಾರು ಪರಿಶೀಲಿಸಿದಾಗ ಮೃತದೇಹ ಇರುವುದು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಪೊಲೀಸರು ಆಶ್ರಮವನ್ನು ಸಂಪೂರ್ಣವಾಗಿ ಸೀಲ್ ಮಾಡಿದ್ದಾರೆ ಎಂದು ವರದಿಯಾಗಿದೆ.