ಬೆಂಗಳೂರು, ಏ 08 (DaijiworldNews/MS): ಏಪ್ರಿಲ್ 10ರ ಭಾನುವಾರದಿಂದ ಕೋವಿಡ್ ಮುನ್ನೆಚ್ಚರಿಕೆ ಡೋಸ್ ನ್ನು 18 ವರ್ಷ ಮೇಲ್ಪಟ್ಟವರು ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಪಡೆಯಬಹುದು ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವಂತ ಅವರು, ಕೊರೊನಾ ವಿರುದ್ಧದ ನಮ್ಮ ಹೋರಾಟವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಏಪ್ರಿಲ್ 10 ರಿಂದ 18 ವರ್ಷ ಮೇಲ್ಪಟ್ಟ ನಾಗರೀಕರಿಗೆ ಮುನ್ನೆಚ್ಚರಿಕೆ ಡೋಸ್ ಪಡೆಯಲು ಅನುಮತಿ ನೀಡಲಾಗಿದೆ. 18 ವರ್ಷ ಮೇಲ್ಪಟ್ಟವರು ಎರಡನೇ ಡೋಸ್ ಪಡೆದು 9 ತಿಂಗಳು ಪೂರ್ಣವಾಗಿದ್ದಲ್ಲಿ ಭಾನುವಾರದಿಂದ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಡೋಸ್ ಪಡೆಯಬಹುದು ಎಂದು ಹೇಳಿದ್ದಾರೆ.
ಮೊದಲ ಮತ್ತು ಎರಡನೇ ಡೋಸ್ಗಾಗಿ ಸರ್ಕಾರಿ ಲಸಿಕೆ ಕೇಂದ್ರಗಳ ಮೂಲಕ ನಡೆಯುತ್ತಿರುವ ಉಚಿತ ಲಸಿಕೆ ಕಾರ್ಯಕ್ರಮ ಮತ್ತು ಆರೋಗ್ಯ ಕಾರ್ಯಕರ್ತರು, ಮುಂಚೂಣಿಯ ಕಾರ್ಯಕರ್ತರು ಮತ್ತು 60 ವಯಸ್ಸಿನ ಮೇಲ್ಪಟ್ಟು ಜನರಿಗೆ ನೀಡುತ್ತಿರುವ ಮುನ್ನೆಚ್ಚರಿಕೆ ಡೋಸ್ ಮುಂದುವರಿಯುತ್ತದೆ. ಅಲ್ಲದೇ ಈ ಅಭಿಯಾನ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ.