ನವದೆಹಲಿ, ಏ 08 (DaijiworldNews/MS): ಲೋಕಸಭೆಯಲ್ಲಿ ಸಂಸದ ಫಾರೂಕ್ ಅಬ್ದುಲಾ ಅವರು ಭಾಷಣ ಮಾಡುತ್ತಿದ್ದರೆ, ಅದರ ಅರಿವೇ ಇಲ್ಲದ ಕಾಂಗ್ರೆಸ್ ಸಂಸದ ಶಶಿ ತರೂರ್ ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಸಂಸದೆ ಸುಪ್ರಿಯಾ ಸುಳೆ ಅವರೊಂದಿಗೆ ನಡೆದ ಸಂಭಾಷಣೆಯ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಪುಷ್ಪ ಸಿನಿಮಾ ಶ್ರೀವಲ್ಲಿ ಹಾಡಿನ ಆಡಿಯೋ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಶಿ ತರೂರ್ "ಕುಚ್ ತೋ ಲೋಗ್ ಕಹೆಂಗೆ, ಪೀಪಲ್ ಕಾ ಕಾಮ್ ಹೈ ಕೆಹನಾ ಹೈ" ಎಂದು ಹೇಳಿದ್ದಾರೆ. ಸುಪ್ರಿಯಾ ಸುಳೆ ಜೊತೆ ನೀತಿ ಸಂಬಂಧಿತ ಪ್ರಶ್ನೆಯೊಂದರ ಬಗ್ಗೆ ಚರ್ಚಿಸುತ್ತಿದ್ದೆ ಎಂದು ಶಶಿತರೂರ್ ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋ ಮಂಗಳವಾರ ಲೋಕಸಭೆಯಲ್ಲಿ ನಿಯಮ 193ರ ಅಡಿಯಲ್ಲಿ ಉಕ್ರೇನ್ನಲ್ಲಿನ ಪರಿಸ್ಥಿತಿಯ ಕುರಿತು ಚರ್ಚೆಯ ಸಮಯವದು. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರು ಸದನದಲ್ಲಿ ಮಾತನಾಡುತ್ತಿದ್ದರು. ಅವರ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಸುಪ್ರಿಯಾ ಸುಳೆ ಹಾಗೂ ಅದರ ಹಿಂದಿನ ಸಾಲಿನಲ್ಲಿದ್ದ ತರೂರು ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದರು. ತರೂರು ಅವರಂತು ತದೇಕಚಿತ್ತದಿಂದ ಸುಳೆ ಅವರ ಮಾತನ್ನು ಆಲಿಸುತ್ತಿದ್ದರು. ಈ ವಿಡಿಯೋಗೆ ಮೀಮ್ ಗಳ ಪ್ರವಾಹವೇ ಹರಿದುಬಂದಿದೆ.
ಈ ವಿಡಿಯೋ ಕುರಿತು ಟ್ವೀಟ್ ಮಾಡಿರುವ ತರೂರ್, 'ಲೋಕಸಭೆಯಲ್ಲಿ ನನ್ನ ಮತ್ತು ಸುಪ್ರಿಯಾ ಸುಳೆ ನಡುವಿನ ಸಂಕ್ಷಿಪ್ತ ಸಂಭಾಷಣೆಯನ್ನು ಆನಂದಿಸುತ್ತಿರುವವರಿಗೆ, ಅವರು ಮುಂದಿನವರು ಆಗಲಿರುವ ಕಾರಣ ನೀತಿಗೆ ಸಂಬಂಧಿಸಿದ ಪ್ರಶ್ನೆಯನ್ನು ನನಗೆ ಕೇಳುತ್ತಿದ್ದಾರೆ ಎಂದು ನಾನು ತಿಳಿಸಲು ಬಯಸುತ್ತೇನೆ. ಫಾರೂಕ್ ಅವರು ವಿಚಲಿತರಾಗದಂತೆ ಸುಪ್ರಿಯಾ ನಿಧಾನವಾಗಿ ಮಾತನಾಡುತ್ತಿದ್ದರು. ನಾನು ಸುಪ್ರಿಯಾ ಮಾತನ್ನು ಕೇಳಲು ನಮಸ್ಕರಿಸಿದ್ದೇನೆ ಎಂದು ಟ್ವೀಟಿಸಿದ್ದಾರೆ. ನಂತರ ಮತ್ತೊಂದು ಟ್ವೀಟ್ನಲ್ಲಿ ಅವರು 'ಅಮರ್ ಪ್ರೇಮ್' ಚಿತ್ರದ ಪ್ರಸಿದ್ಧ ಹಾಡಿನ ಕೆಲವು ಸಾಲುಗಳನ್ನು ಬರೆದಿದ್ದಾರೆ.