ಆಂಧ್ರಪ್ರದೇಶ, ಏ.07 (DaijiworldNews/SM): ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿಯವರ ಸಚಿವ ಸಂಪುಟದ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದು, ಹೊಸ ಸಂಪುಟ ರಚನೆಗೆ ಸಿದ್ಧತೆ ನಡೆಯುತ್ತಿದೆ. ಅದರಂತೆ, ಏಪ್ರಿಲ್ 11 ರಂದು ಹೊಸ ಸಂಪುಟ ರಚನೆಯಾಗಲಿದೆ.
ಜುಲೈ 2019ರಲ್ಲಿ ಜಗನ್ ಮೋಹನ್ ರೆಡ್ಡಿಯವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ತಮ್ಮ ಐದು ವರ್ಷದ ಅಧಿಕಾರ ಅವಧಿಯಲ್ಲಿ ಅರ್ಧ ಅವಧಿ ಪೂರ್ಣಗೊಂಡ ಬಳಿಕ ಸಚಿವ ಸಂಪುಟವನ್ನು ಸಂಪೂರ್ಣವಾಗಿ ಪುನರಚಿಸಲಾಗುವುದೆಂದು ಅವರು ತಿಳಿಸಿದ್ದರು. ಅದರಂತೆ ಇದೀಗ ಅಧಿಕಾರದ ಅರ್ಧ ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಸಂಪುಟ ವಿಸರ್ಜಿಸಿ ಹೊಸ ಸಚಿವರುಗಳನ್ನು ಸೇರಿಸಿಕೊಳ್ಳುವುದಕ್ಕೆ ಸಿದ್ಧತೆಗಳನ್ನು ನಡೆಸಿಕೊಂಡಿದ್ದಾರೆ.
ರಾಜೀನಾಮೆ ನೀಡಿರುವ ಸಚಿವರಲ್ಲಿ ಒಂದೆರಡು ಶಾಸಕರು ಮಾತ್ರ ಜಗನ್ ಮೋಹನ್ ರೆಡ್ಡಿ ಅವರ ಹೊಸ ತಂಡಕ್ಕೆ ಮತ್ತೆ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.