ನವದೆಹಲಿ, ಏ 07 (DaijiworldNews/MS): ಏರ್ ಇಂಡಿಯಾ, ವಾರದಲ್ಲಿ ಎರಡು ದಿನ ದೆಹಲಿಯಿಂದ ಮಾಸ್ಕೋಗೆ ಸಂಚರಿಸುತ್ತಿದ್ದ ವಿಮಾನ ಹಾರಾಟ ಸೇವೆಯನ್ನು ರದ್ದುಗೊಳಿಸಿದೆ. ರಷ್ಯಾ ವಾಯು ಪ್ರದೇಶದಲ್ಲಿ ವಿಮಾನಗಳ ವಿಮೆ ರಕ್ಷಣೆ ಸಿಗದ ಕಾರಣಕ್ಕೆ ಸೇವೆ ನಿಲ್ಲಿಸಲಾಗಿದೆ ಎಂದು ಹೇಳಲಾಗಿದೆ.
ವಿಮಾನಗಳ ವಿಮಾ ಸೇವೆಯನ್ನು ಸಾಮಾನ್ಯವಾಗಿ ಪಾಶ್ಚಾತ್ಯ ದೇಶಗಳ ಮೂಲದ ಕಂಪನಿಗಳು ಒದಗಿಸುತ್ತವೆ. ಆದರೆ, ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾ ವಿರುದ್ಧ ಹಲವು ಬಗೆಯ ನಿರ್ಬಂಧಗಳನ್ನು ಹೇರಿವೆ. ಅಲ್ಲದೆ ಉಕ್ರೇನ್ನ ಮೇಲೆ ರಷ್ಯಾದ ಆಕ್ರಮಣದ ಬೆದರಿಕೆ ಹೆಚ್ಚಿದ ಕಾರಣ ವಿಮಾ ರಕ್ಷಣೆ ಪಡೆಯಲು ಸಾಧ್ಯವಾಗದ ಕಾರಣ ಏರ್ ಇಂಡಿಯಾ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಫೆಬ್ರವರಿ 24 ರಂದು ರಷ್ಯಾ, ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ನಂತರ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಎಲ್ಲಾ ವಿಮಾನಯಾನ ಸಂಸ್ಥೆಗಳನ್ನು ನಿಷೇಧಿಸಿದ್ದವು. ಆದರೂ , ಏರ್ ಇಂಡಿಯಾ ವಾರಕ್ಕೆ ಎರಡು ಬಾರಿ ದೆಹಲಿ-ಮಾಸ್ಕೋ ವಿಮಾನ ಹಾರಾಟ ನಡೆಸುತ್ತಿತ್ತು. ಭಾರತ ತನ್ನ ವಾಯುಪ್ರದೇಶದಲ್ಲಿ ರಷ್ಯಾದ ವಿಮಾನಗಳನ್ನು ನಿಷೇಧಿಸಿಲ್ಲ.
ಇನ್ನೂ ರಷ್ಯಾಗೆ ತಾಷ್ಕೆಂಟ್, ಇಸ್ತಾಂಬುಲ್, ದುಬೈ, ಅಬುಧಾಬಿ, ದೋಹಾ ಮತ್ತು ಇತರ ಸ್ಥಳಗಳ ಮೂಲಕ ಸಾರಿಗೆ ಮಾರ್ಗಗಳನ್ನು ಬಳಸಿಕೊಂಡು ದೆಹಲಿಯಿಂದ ಮಾಸ್ಕೋಗೆ ಪ್ರಯಾಣಿಸಬಹುದಾಗಿದೆ.