ಮೈಸೂರು, ಏ 07 (DaijiworldNews/HR): ಅಲ್ಪಸಂಖ್ಯಾತರ ಮತಕ್ಕಾಗಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ಸ್ಪರ್ಧೆ ಪ್ರಾರಂಭವಾಗಿದ್ದು, ಇಬ್ಬರಿಬ್ಬರೂ ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರು ಟೀಕಿಸುವಂತೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೌನಿ ಅಲ್ಲ. ಎಲ್ಲ ವಿಚಾರಗಳಲ್ಲೂ ಅವರು ಸ್ಪಷ್ಟತೆಯಿಂದ ಮಾತನಾಡುತ್ತಾರೆ. ಕಾಂಗ್ರೆಸ್, ಜೆಡಿಎಸ್ನವರಿಗೆ ಕಾನೂನು, ಪ್ರಜಾಪ್ರಭುತ್ವ ಅಂದರೆ ಏನೆಂಬುದೇ ಗೊತ್ತಿಲ್ಲ ಎಂದರು.
ಇನ್ನು ಸರ್ಕಾರವು ಕಾನೂನಿಗೆ ವಿರುದ್ಧವಾದ ಯಾವುದೇ ಕೆಲಸವನ್ನೂ ಮಾಡುವುದಿಲ್ಲ. ಓಲೈಕೆ ರಾಜಕಾರಣ ನಮ್ಮದಲ್ಲ. ಎಲ್ಲ ಜಾತಿ, ಧರ್ಮದವರನ್ನೂ ಒಂದೇ ಎಂಬ ಭಾವನೆಯಿಂದ ನೋಡುತ್ತೇವೆ ಎಂದು ಹೇಳಿದ್ದಾರೆ.