ಬೆಂಗಳೂರು, ಏ 07 (DaijiworldNews/HR): ರಾಜ್ಯ ಸರ್ಕಾರ ಅಥವಾ ಯಾವುದೇ ಸಚಿವರು ಹಲಾಲ್ ಕಟ್ ಮಾಂಸವನ್ನು ಖರೀದಿ ಮಾಡಬಾರದೆಂದು ಹೇಳಿಕೆ ನೀಡಿಲ್ಲ. ಸಿ.ಟಿ. ರವಿ ಸರ್ಕಾರದ ಭಾಗವಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಂಸ ತಿನ್ನುವುದು ಮತ್ತು ಖರೀದಿ ಮಾಡುವುದು ಜನರ ವೈಯಕ್ತಿಕ ವಿಚಾರ. ಹೀಗಾಗಿಯೇ ಸರ್ಕಾರ ಯಾವುದೇ ಆದೇಶ ಅಥವಾ ಹೇಳಿಕೆ ನೀಡಿಲ್ಲ ಎಂದರು.
ಇನ್ನು ಹಲಾಲ್ ಮಾಂಸ ಖರೀದಿ ವಿಚಾರವಾಗಿ ಸಿ.ಟಿ. ರವಿ ಹೇಳಿದ್ದಾರಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಾಗೇಶ್, ಸಿ.ಟಿ. ರವಿ ಈಗ ಸಚಿವರೂ ಅಲ್ಲ, ಮಾಜಿ ಮಂತ್ರಿಗಳು. ಅವರು ದೇಶದ ಪ್ರಜೆಯಾಗಿ ಹೇಳಿಕೆ ನೀಡಿದ್ದಾರೆ. ಸರ್ಕಾರ ಹೇಳಿಕೆ ನೀಡಿದ್ದರೆ ಮಾತ್ರ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.