ಬೆಂಗಳೂರು, ಏ. 06 (DaijiworldNews/SM): ರಾಜ್ಯ ಸಚಿವ ಸಂಪುಟ ಸರ್ಜರಿಗೆ ಕಸರತ್ತು ನಡೆಸಲಾಗುತ್ತಿದ್ದು, ಗೃಹಸಚಿವ ಅರಗ ಜ್ಞಾನೇಂದ್ರ ಸ್ಥಾನಕ್ಕೆ ಕಂಟಕ ಎದುರಾಗುವ ಸಾಧ್ಯತೆಗಳಿವೆ. ಗೃಹ ಸಚಿವರ ತಲೆ ದಂಡಕ್ಕೆ ಪಕ್ಷದ ವರಿಷ್ಠರು ಮುಂದಾಗಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಹಿಜಾಬ್ ವಿವಾದದ ಬಳಿಕ ಎದ್ದಿರುವ ಅಶಾಂತಿಯ ವಾತಾವರಣೆ ವಿವಿಧ ಸ್ವರೂಪಗಳಲ್ಲಿ ಮುಂದುವರೆದಿದೆ. ಇದು ಸರಕಾರಕ್ಕೆ ತಲೆನೋವಾಗುವ ಜೊತೆಗೆ ಸರಕಾರ ಕಠಿಣ ನಿರ್ಣಯ ಕೈಗೊಳ್ಳಲು ವಿಫಲವಾಗಿದೆ ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ. ಅಲ್ಲದೆ ಸಿಎಂ ಹಾಗೂ ಗೃಹಸಚಿವರು ತಮ್ಮ ಸ್ಥಾನ ತ್ಯಜಿಸುವಂತೆಯೂ ಆಗ್ರಹಿಸುತ್ತಿದ್ದಾರೆ. ಈ ನಡುವೆ ವಿವಾದ ಬೇರೆಯೇ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ನಡುವೆ ಇದೀಗ ರಾಜ್ಯ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.
ರಾಜ್ಯದಲ್ಲಿ ನಡೆಯುತ್ತಿರುವ ಕೆಲವೊಂದು ಬೆಳವಣಿಗೆಗಳಿಂದಾಗಿ ಪಕ್ಷದ ವರ್ಚಸ್ಸಿಗೆ ದಕ್ಕೆಯಾಗುವ ಕಾರಣದಿಂದ ಮಹತ್ವದ ನಿರ್ಣಯ ಕೈಗೊಳ್ಳಲು ವರಿಷ್ಠರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಈಗಾಗಲೇ ಸಿಎಂ ಬಸವರಾಜ್ ಬೊಮ್ಮಾಯಿ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಕರಾವಳಿ ನಾಯಕರೊಬ್ಬರಿಗೆ ಸಿಗುವುದೇ ಗೃಹ ಖಾತೆ?
ಇನ್ನು ಕರಾವಳಿಯ ಪ್ರಭಾವಿ ನಾಯಕರೊಬ್ಬರಿಗೆ ಗೃಹ ಖಾತೆ ಸಿಗುವ ಲಕ್ಷಣಗಳಿವೆ ಎನ್ನಲಾಗುತ್ತಿದೆ. ಈಗಾಗಲೇ ಇಂಧನ ಇಲಾಖೆ ನಿಭಾಯಿಸುತ್ತಿರುವ ಸಚಿವ ಸುನೀಲ್ ಕುಮಾರ್ ಅವರು ಸಿಎಂ ಜೊತೆ ದೆಹಲಿಯಲ್ಲಿದ್ದು, ಅವರಿಗೆ ಗೃಹ ಇಲಾಖೆಯನ್ನು ನೀಡಲು ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ. ಮತ್ತೊಂದೆಡೆ ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡಿಸಿ ಅವರಿಗೆ ಇಂಧನ ಇಲಾಖೆ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ.
ಒಟ್ಟಿನಲ್ಲಿ ಸದ್ಯ ಸಂಪುಟ ಸರ್ಜರಿಯತ್ತ ಎಲ್ಲರ ಚಿತ್ತ ನೆಟ್ಟಿದ್ದು, ಸಿಎಂ ದೆಹಲಿಯಿಂದ ಮರಳಿದ ಬಳಿಕ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.