ಬೆಂಗಳೂರು, ಏ 06 (DaijiworldNews/DB): ಹಿಜಾಬ್ ಸಂಘರ್ಷದ ವೇಳೆ ಅಲ್ಲಾಹು ಅಕ್ಬರ್ ಎಂದು ಕೂಗಿದ್ದ ಮಂಡ್ಯದ ವಿದ್ಯಾರ್ಥಿನಿಯನ್ನು ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರ ಅಲ್ಖೈದಾ ಮುಖ್ಯಸ್ಥ ಅಲ್ ಜವಾರಿ ಭಾರತದ ಶ್ರೇಷ್ಠ ಮಹಿಳೆ ಎಂದು ಹೇಳಿದ್ದಾನೆ.
ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಅಲ್ ಜವಾರಿ, ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ಳ ಧೈರ್ಯ ಮೆಚ್ಚುವಂತಹುದಾಗಿದೆ. ಈಕೆ ಭಾರತದ ಶ್ರೇಷ್ಠ ಮಹಿಳೆ ಎಂದಿದ್ದಾನೆ.
ಭಾರತದಲ್ಲಿ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಕೆಲವರು ಗಲಾಟೆ ಮಾಡುತ್ತಿದ್ದಾರೆ. ಮುಸಲ್ಮಾನರ ಮೇಲೆ ದೌರ್ಜನ್ಯ ನಡೆದಾಗ ಅದನ್ನು ವಿರೋಧಿಸುವ ಕೆಲಸವನ್ನು ಮಾಡಬೇಕು. ಸಹನೆಯಿಂದಿದ್ದರೆ ಅದನ್ನೇ ದೌರ್ಬಲ್ಯ ಎಂದು ಪರಿಗಣಿಸುತ್ತಾರೆ ಎಂದು ಸುಮಾರು ಎಂಟು ನಿಮಿಷದ ಆಡಿಯೋದಲ್ಲಿ ಆತ ಮಾತನಾಡಿದ್ದಾನೆ.
ಈತನ ವೀಡಿಯೋ ಬಗ್ಗೆ ಹಿಂದುಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಭಾರತದ ಆಂತರಿಕ ವಿಚಾರದಲ್ಲಿ ಅಲ್ ಜವಾರಿ ತಲೆ ಹಾಕುವ ಅವಶ್ಯಕತೆ ಇಲ್ಲ ಎಂದಿವೆ. ಹಿಜಾಬ್ ವಿವಾದದ ಹಿಂದೆ ಅಂತಾರಾಷ್ಟ್ರೀಯ ಪಿತೂರಿ ಇದೆ ಎಂಬುದಾಗಿ ಈ ಹಿಂದೆ ಹೇಳಿದ್ದೆವು. ಅಲ್ ಜವಾರಿ ವೀಡಿಯೋ ಮುಖಾಂತರ ಅದಕ್ಕೆ ಪ್ರಸ್ತುತ ಪುಷ್ಠಿ ಸಿಕ್ಕಿದೆ ಎಂದು ಹಿಂದೂಪರ ಸಂಘಟನೆಗಳಾದ ಶ್ರೀರಾಮ ಸೇನೆ, ಬಜರಂಗದಳ, ವಿಶ್ವ ಹಿಂದು ಪರಿಷತ್, ಹಿಂದೂ ಜಾಗರಣ ವೇದಿಕ ಮತ್ತಿತರ ಸಂಘಟನೆಗಳು ಕಿಡಿ ಕಾರಿವೆ.
ಇನ್ನು ಉಗ್ರ ಜವಾರಿ ಹೇಳಿಕೆ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್, ಉಗ್ರ ಸಂಘಟನೆಗಳು ಭಾರತದ ವಿಚಾರದಲ್ಲಿ ಮೂಗು ತೂರಿಸುವುದು ಬೇಡ. ಇರುವ ಕಾನೂನನ್ನು ಸರ್ಕಾರ ಜಾರಿ ಮಾಡಿದೆಯೇ ಹೊರತು ಹೊಸತನ್ನು ಸೃಷ್ಟಿಸಿಲ್ಲ. ಉಗ್ರನ ಹೇಳಿಕೆ ಖಂಡನೀಯ ಎಂದು ತಿಳಿಸಿದ್ದಾರೆ.