ಬೆಂಗಳೂರು, ಏ 06 (DaijiworldNews/DB): ಶ್ರೇಷ್ಠ ವ್ಯಕ್ತಿತ್ವಗಳ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಕಿಡಿ ಕಾರಿದ್ದಾರೆ.
ಬಾಬು ಜಗಜೀವನ್ ರಾಮ್ ಅವರ ಜನ್ಮ ಜಯಂತಿ ದಿನದಂದು ಸಿದ್ದರಾಮಯ್ಯನವರು ಮಾತನಾಡಿದ ಮಾತುಗಳಿಂದ ಅವರಿಗೆ ನೈಜ ಅಂಶಗಳು ಗೊತ್ತಿಲ್ಲ. ಹಾಗಾಗಿ ಕೆಲ ಪ್ರಶ್ನೆಗಳನ್ನು ಅವರ ಮುಂದಿಡುತ್ತಿದ್ದೇನೆ ಎಂದಿದ್ದಾರೆ.
ಬಾಬು ಜಗಜೀವನ್ ರಾಮ್ ಇದ್ದ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯನವರೂ ಇದ್ದರೇ? ಅವರಿಗೆ ಕಾಂಗ್ರೆಸ್ ಪಕ್ಷದವರು ನೀಡಿದ ಸಮ್ಮಾನಗಳ ಬಗ್ಗೆ ಸಿದ್ದರಾಮಯ್ಯ ಅವರಿಗೆ ತಿಳಿದಿದೆಯೇ? ಜಗಜೀವನ್ ರಾಮ್ ಅವರು ಕಾಂಗ್ರೆಸ್ ತೊರೆದು ಕಾಂಗ್ರೆಸ್ ಫಾರ್ ಡೆಮಾಕ್ರೇಸಿ ಪಕ್ಷ ಸ್ಥಾಪನೆ ಮಾಡಿರುವ ವಿಚಾರ ಸಿದ್ದರಾಮಯ್ಯ ಅವರಿಗೆ ತಿಳಿದಿದೆಯೇ ಸೇರಿದಂತೆ ವಿವಿಧ ಪ್ರಶ್ನೆಗಳನ್ನು ಸಿದ್ಧರಾಮಯ್ಯ ಅವರಿಗೆ ಸುರೇಶ್ಕುಮಾರ್ ಕೇಳಿದ್ದಾರೆ.
ಮಹಾನ್ ನಾಯಕರ ಜನ್ಮ ದಿನದಂದು ರಾಜಕೀಯ ಮಾತನಾಡುವುದು ಸಲ್ಲ. ಆದರೆ ಸಿದ್ದರಾಮಯ್ಯ ಅವರು ಅಂತಹ ವಿಶಿಷ್ಟ ದಿನಗಳಿಗೂ ರಾಜಕೀಯ ಬೆರೆಸುತ್ತಾರೆ, ಅವರದನ್ನು ಚುನಾವಣಾ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿರುವುದು ಸೋಜಿಗ ಎಂದು ಸುರೇಶ್ಕುಮಾರ್ ಹರಿಹಾಯ್ದಿದ್ದಾರೆ.
ಮಂಗಳವಾರ ನಡೆದ ಬಾಬು ಜಗಜೀವನ್ ರಾಂ ಜನ್ಮ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ದೇಶದಲ್ಲಿ ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆ ಹುಟ್ಟು ಹಾಕಿದ್ದು ಬಿಜೆಪಿ ಹಾಗೂ ಆರೆಸ್ಸೆಸ್ ಎಂದು ಹೇಳಿದ್ದರು. ಅಲ್ಲದೆ ಪಾಕಿಸ್ತಾನವನ್ನು ಬಗ್ಗು ಬಡಿದು ಬಾಂಗ್ಲಾದೇಶ ಉದಯಕ್ಕೆ ಕಾರಣವಾಗಿದ್ದು ಮೋದಿ ಅಥವಾ ಬೊಮ್ಮಾಯಿ ಅಲ್ಲ, ಬದಲಾಗಿ ಇಂದಿರಾಗಾಂಧಿ ಹಾಗೂ ಬಾಬು ಜಗಜೀವನ್ ರಾಂ ಎಂದಿದ್ದರು.
ಈ ದೇಶಕ್ಕೆ ಆಹಾರ ಭದ್ರತೆ ಕೊಟ್ಟಿದ್ದು, ಪಾಕಿಸ್ತಾನ ಬಗ್ಗುಬಡಿದು ಬಾಂಗ್ಲಾದೇಶ ಉದಯಕ್ಕೆ ಕಾರಣರಾಗಿದ್ದು ಇಂದಿರಾಗಾಂಧಿ ಹಾಗೂ ಬಾಬು ಜಗಜೀವನ್ ರಾಮ್. ಆದರೆ ಮೋದಿ ಅಥವಾ ಬೊಮ್ಮಾಯಿ ಕೊಟ್ಟಿದ್ದಲ್ಲ. ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಸುರೇಶ್ಕುಮಾರ್ ಸಿದ್ದರಾಮಯ್ಯ ಅವರಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.