ಶ್ರೀನಗರ, ಏ 06 (DaijiworldNews/DB): ಜಮ್ಮು-ಕಾಶ್ಮೀರದಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 66 ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ ಎಂದು ಕಾಶ್ಮೀರ ವಲಯ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಗಡಿ ಪ್ರದೇಶ ಜಮ್ಮು ಕಾಶ್ಮೀರದಲ್ಲಿ ಉಗ್ರಕೃತ್ಯಗಳನ್ನು ನಿಗ್ರಹಿಸುವಲ್ಲಿ ಭಾರತೀಯ ಸೇನೆ ಸದಾ ತೊಡಗಿಸಿಕೊಂಡಿದೆ. ಡಿಸೆಂಬರ್ 2021ರಿಂದ ಮಾರ್ಚ್ವರೆಗೆ 66 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ. ಪರವೂರಿನಿಂದ ಬಂದು ಪುಲ್ವಾಮಾದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರನ್ನು ಕೊಂದ ಉಗ್ರರ ಗುರುತು ಪತ್ತೆಯಾಗಿದೆ. ಸದ್ಯದಲ್ಲಿಯೇ ಈ ಉಗ್ರರನ್ನು ಹತ್ಯೆ ಮಾಡಲಾಗುವುದು. ಅಲ್ಲದೆ, ಶೋಪಿಯಾನ್ನ ಹಳ್ಳಿಯೊಂದರಲ್ಲಿ ಕಾಶ್ಮೀರಿ ಪಂಡಿತರ ಮೇಲಾದ ದಾಳಿ ಸಂಬಂಧಿಸಿದಂತೆಯೂ ಸೇನೆ ಪರಿಶೀಲಿಸುತ್ತಿದೆ. ಉಗ್ರರ ವಿರುದ್ಧದ ಕಾದಾಟದಲ್ಲಿ ಭಾರತೀಯ ಸೇನೆ ಸದಾ ಜಯದ ಹಾದಿಯಲ್ಲಿದೆ ಎಂದರು.
ಜಮ್ಮು-ಕಾಶ್ಮೀರದ ಆವಂತಿಪೊರಾದ ಟ್ರಾಲ್ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ನಡೆದ ಎನ್ ಕೌಂಟರ್ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಶ್ರೀನಗರದಲ್ಲಿ ಉಗ್ರಕೃತ್ಯಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದ ಉಮರ್ ತೇಲಿ ಮತ್ತು ಸಫತ್ ಎಂಬ ಭಯೋತ್ಪಾದಕರು ಹತರಾದವರು. ಟ್ರಾಲ್ಗೆ ಪರಾರಿಯಾಗಿದ್ದಈ ಇಬ್ಬರೂ ಭಯೋತ್ಪಾದಕರನ್ನು ಸೇನೆಯು ಪತ್ತೆಹಚ್ಚಿ ಇಂದು ಹತ್ಯೆ ಮಾಡಿದೆ ಎಂದು ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.