ನವದೆಹಲಿ, ಏ 06 (DaijiworldNews/DB): ಬಿಜೆಪಿ ರಾಷ್ಟ್ರಭಕ್ತಿಗೆ ಸಮರ್ಪಿತವಾಗಿರುವ ಪಕ್ಷ. ಆದರೆ ಪ್ರತಿಪಕ್ಷಗಳ ಸಮರ್ಪಣೆ ಕೇವಲ 'ಪರಿವಾರ ಭಕ್ತಿಗಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಜೆಪಿಯ 42ನೇ ಸಂಸ್ಥಾಪನಾ ದಿನದಂದು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, ಕುಟುಂಬ ರಾಜಕಾರಣವು ದೇಶಕ್ಕೆ ಅಪಾಯವಾಗಿದೆ. ಪಕ್ಷದ ಪ್ರತಿಯೊಬ್ಬರೂ ಚುನಾವಣಾ ಪ್ರಚಾರದ ವೇಳೆ ಇದನ್ನು ಜನಸಾಮಾನ್ಯರಿಗೆ ತಲುಪಿಸಬೇಕು. ಪರಿವಾರದ ಕೈಯಲ್ಲಿ ಅಧಿಕಾರ ನೀಡಬೇಕೋ, ರಾಷ್ಟ್ರಭಕ್ತಿಗೆ ಸಮರ್ಪಿತವಾಗಿರುವ ಪಕ್ಷಕ್ಕೆ ಅಧಿಕಾರ ನೀಡಬೇಕೋ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕು ಎಂದರು.
ಕುಟುಂಬ ರಾಜಕಾರಣ ಮಾಡುವ ಪಕ್ಷಗಳಿಂದ ಸಾಂವಿಧಾನಿಕ ಮಾನದಂಡಗಳು ಪಾಲನೆಯಾಗುವುದಿಲ್ಲ. ಭ್ರಷ್ಟಾಚಾರದಂತಹ ಪಿಡುಗುಗಳು ಇಂತಹವುಗಳಿಂದ ಮುಚ್ಚಿ ಹೋಗುತ್ತವೆ. ಪರಿವಾರದವರಿಗೇ ಹುದ್ದೆ ನೀಡುತ್ತಾರೆಯೇ ಹೊರತು ಯುವಕರಿಗೆ ಅವಕಾಶ ಕಲ್ಪಿಸುವುದಿಲ್ಲ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಯಾವತ್ತೂ ಅವಕಾಶ ನೀಡಲಾಗುವುದಿಲ್ಲ ಎಂದವರು ಹೇಳಿದರು.
ಈ ಹಿಂದೆ ಅಧಿಕಾರದಲ್ಲಿದ್ದ ಪಕ್ಷಗಳು ಮತಬ್ಯಾಂಕ್ ರಾಜಕಾರಣ ಮಾಡಿ ಕೇವಲ ಕೆಲವೇ ವರ್ಗದವರಿಗೆ ಯೋಜನೆಗಳ ಪ್ರಯೋಜನ ಕಲ್ಪಿಸುತ್ತಿದ್ದರು. ಇದರಿಂದ ಇತರ ವರ್ಗದವರು ಅನ್ಯಾಯಕ್ಕೊಳಗಾಗುತ್ತಿದ್ದರು. ಆದರೆ ಇಂತಹ ಅನ್ಯಾಯ ಬಿಜೆಪಿಯಿಂದ ಎಂದಿಗೂ ಆಗುವುದಿಲ್ಲ ಎಂದರು.