ಬೆಂಗಳೂರು, ಏ 06 (DaijiworldNews/DB): ಉರ್ದು ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಚಂದ್ರು ಹತ್ಯೆಯಾಗಿದೆ ಎಂಬ ಗೃಹ ಸಚಿವರ ಹೇಳಿಕೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರು ಉರ್ದು ಮಾತನಾಡಿಲ್ಲ ಎಂಬ ಕಾರಣದಿಂದ ಆತನ ಹತ್ಯೆಯಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಹೇಳಿದ್ದಾರೆ. ಕೊಲೆ ವಿಚಾರವನ್ನು ಅವರು ವರ್ಣನಾತ್ಮಕವಾಗಿ ಹೇಳಿರುವುದು ತೀರಾ ಸಣ್ಣತನದಿಂದ ಕೂಡಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಇಂತಹ ಹೇಳಿಕೆಗಳು ಕಾರಣವಾಗುತ್ತವೆ ಎಂದು ಆರೋಪಿಸಿದ್ದಾರೆ.
ಬೈಕ್ ಡಿಕ್ಕಿಯಾಗಿ ಉಂಟಾದ ಜಗಳವು ತಾರಕ್ಕೇರಿ ಭಾಷಾ ವಿಚಾರ ಮುನ್ನೆಲೆಗೆ ಬಂದು ಕೊಲೆಯಲ್ಲಿ ಅಂತ್ಯವಾಗಿದೆ. ಕನ್ನಡ ಮಾತನಾಡುತ್ತಿದ್ದ ಯುವಕ ಚಂದ್ರುನನ್ನು ಉರ್ದು ಮಾತನಾಡು ಎಂದು ಆರೋಪಿಯು ಒತ್ತಾಯಿಸಿದ್ದಾನೆ. ಆತ ತನಗೆ ಉರ್ದು ಬರುವುದಿಲ್ಲ ಎಂದಿದ್ದಕ್ಕೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಗೃಹ ಸಚಿವರು ತಮ್ಮ ಜವಾಬ್ದಾರಿ ಅರಿತು ಮಾತನಾಡಬೇಕು ಎಂದವರು ಸಲಹೆ ಮಾಡಿದ್ದಾರೆ.
ಇನ್ನು ಚಂದ್ರ ಹತ್ಯೆ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರೂ ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡ ಮಾತನಾಡಿದ ಎಂಬ ಕಾರಣಕ್ಕೆ ಚಂದ್ರುವನ್ನು ಹತ್ಯೆ ಮಾಡಿರುವುದರ ಹಿಂದೆ ಪ್ರಚೋದನೆ ಕೆಲಸ ಮಾಡಿದೆ ಎಂದು ಆಪಾದಿಸಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಶೀಘ್ರ ಹೊರಬರಬೇಕು. ಕನ್ನಡ ಮಾತನಾಡಿದ ಕಾರಣಕ್ಕೆ ಕೊಲೆ ಮಾಡಿದ್ದೇ ಹೌದಾದಲ್ಲಿ ಆರೋಪಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದವರು ಈ ವೇಳೆ ತಿಳಿಸಿದರು.