ನವದಹೆಲಿ, ಏ 06 (DaijiworldNews/DB): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿ ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ವಲಯದಲ್ಲಿ ಹೊಸ ಸಂಚಲನ ಶುರುವಾಗಿದೆ. ಸಚಿವಾಕಾಂಕ್ಷಿಗಳು ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿದ್ದರೆ, ಸಂಪುಟದಿಂದ ಕೈ ಬಿಡುವ ಆತಂಕವಿರುವ ಸಚಿವರು ಕೂಡಾ ದೆಹಲಿಯತ್ತ ತೆರಳಿದ್ದಾರೆ ಎನ್ನಲಾಗಿದೆ.
ಅಧಿವೇಶನ ಮುಗಿದ ತತ್ ಕ್ಷಣ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸಿ ಸಂಪುಟ ಪುನಾರಚನೆ ಮಾಡುವುದಾಗಿ ಈ ಹಿಂದೆ ಸಿಎಂ ಬೊಮ್ಮಾಯಿ ಹೇಳಿದ್ದರು. ಇದೀಗ ಅವರ ಮಾತಿನಂತೆ ದೆಹಲಿಗೆ ತೆರಳಿದ್ದು, ಸಹಜವಾಗಿಯೇ ಬಿಜೆಪಿಗರಿಗೆ ನಿರೀಕ್ಷೆ, ತಳಮಳ ಸೃಷ್ಟಿಯಾಗಿದೆ.
ಸಿಎಂ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾದ ಬಳಿಕ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ. ಆದರೆ, ಈಗಾಗಲೇ ಸಚಿವಾಕಾಂಕ್ಷಿಗಳಾದ ಎಂ.ಪಿ. ರೇಣುಕಾಚಾರ್ಯ, ಬಿ.ವೈ. ವಿಜಯೇಂದ್ರ, ಬಸನಗೌಡ ಪಾಟೀಲ್ ಸೇರಿದಂತೆ ಹಲವರು ದೆಹಲಿಗೆ ತೆರಳಿದ್ದಾರೆ. ಸಂಪುಟದಿಂದ ಕೈಬಿಡುವ ಆತಂಕ ಎದುರಿಸುತ್ತಿರುವ ಕೆಲ ಸಚಿವರು ಕೂಡಾ ದಿಲ್ಲಿಗೆ ತೆರಳಿದ್ದಾರೆ ಎನ್ನಲಾಗಿದೆ.
ಸಂಪುಟ ವಿಸ್ತರಣೆಯಾದರೆ ಖಾಲಿ ಇರುವ ನಾಲ್ಕು ಸಚಿವ ಸ್ಥಾನ ಭರ್ತಿಯಾಗಲಿದೆ. ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚು. ಹೀಗಾಗಿ ಹಾಲಿ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಅವರನ್ನು ಮುಂಬರುವ ಚುನಾವಣಾ ದೃಷ್ಟಿಯಿಂದ ಪಕ್ಷ ಸಂಘಟನೆಗೆ ಬಳಸಿಕೊಳ್ಳುವುದು ಮತ್ತು ಸಂಪುಟದಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸುವುದು ಎಂಬ ಲೆಕ್ಕಾಚಾರವೂ ಬಿಜೆಪಿ ಪಾಳಯದೊಳಗೆ ನಡೆದಿದೆ ಎನ್ನಲಾಗಿದೆ. ಜಾತಿ, ಪ್ರಾದೇಶಿಕತೆ ವಿಚಾರದಲ್ಲಿ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕೆಲವರಿದ್ದಾರೆ.
ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ವರಿಷ್ಠರು ಒಪ್ಪಿಗೆ ಸೂಚಿಸಿದ್ದಲ್ಲಿ ಈ ವಾರಾಂತ್ಯದೊಳಗೆ ಅದು ನೆರವೇರುವ ಸಾಧ್ಯತೆ ಇದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಈ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಏಪ್ರಿಲ್ 16ರಂದು ರಾಜ್ಯಕ್ಕೆ ಬರುವುದರಿಂದ ಅವರು ಬಂದು ಹೋದ ನಂತರವಷ್ಟೇ ಪ್ರಕ್ರಿಯೆ ನಡೆಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.