ಚೆನ್ನೈ, ಏ 06 (DaijiworldNews/DB): ನೆಚ್ಚಿನ ರಾಜಕಾರಣಿಗಳಿಗೆ, ಸಿನಿ ತಾರೆಯರಿಗೆ ಅಭಿಮಾನಿಗಳು ದೇಗುಲ ಕಟ್ಟಿಸುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬರು ತಮ್ಮ ಮುದ್ದಿನ ಶ್ವಾನಕ್ಕೆ ದೇಗುಲ ನಿರ್ಮಿಸಿ ಸುದ್ದಿಯಾಗಿದ್ದಾರೆ.
ತಮಿಳುನಾಡಿನ ಶಿವಗಂಗಾಗ ಜಿಲ್ಲೆಯ ಮಾನಾಮಧುರೈ ನಿವಾಸಿ ನಿವೃತ್ತ ಸರ್ಕಾರಿ ನೌಕರ 82 ವರ್ಷದ ಮುತ್ತುಅವರೇ ತಮ್ಮ ಮುದ್ದಿನ ನಾಯಿಗೆ ದೇಗುಲ ನಿರ್ಮಿಸಿದವರು.
ಲ್ಯಾಬ್ರಡಾರ್ ಬ್ರೀಡ್ ನ ಶ್ವಾನವನ್ನು2010ರಿಂದ ಅವರು ತಮ್ಮ ಮನೆಯಲ್ಲಿ ಸಾಕಲು ಆರಂಭಿಸಿದ್ದರು. ನಾಯಿ ಮರಿಗೆ ಟಾಮ್ ಎಂದು ಹೆಸರಿಟ್ಟಿದ್ದರು. ಸುಮಾರು12 ವರ್ಷಗಳಿಂದ ಮನೆಯ ಸದಸ್ಯನಂತೇ ಇದ್ದ ಟಾಮ್ ಅನಾರೋಗ್ಯದಿಂದಾಗಿ ಕಳೆದ ವರ್ಷ ಮೃತಪಟ್ಟಿತ್ತು. ಮನೆಯಲ್ಲಿ ಒಬ್ಬನಂತೆ ಪ್ರೀತಿಸುತ್ತಿದ್ದ ಟಾಮ್ ಸಾವಿನಿಂದ ಮುತ್ತು ಸಹಿತ ಮನೆಮಂದಿ ಕಂಗಾಲಾಗಿದ್ದರು. ಆತನ ನೆನಪು ಸದಾ ಉಳಿಯಬೇಕೆಂಬ ನಿಟ್ಟಿನಲ್ಲಿ ಕಳೆದ ಜನವರಿಯಲ್ಲಿ ಮುತ್ತು ಶ್ವಾನಕ್ಕಾಗಿ ದೇಗುಲ ನಿರ್ಮಿಸಿದ್ದಾರೆ. ದೇಗುಲದಲ್ಲಿ ಆಗಾಗ ಪೂಜೆ, ನೈವೇದ್ಯ ಮಾಡಿ ಮುತ್ತುವಿನ ಸ್ಮರಣೆ ಮಾಡಿಕೊಳ್ಳುತ್ತಾರಂತೆ.
ಅಮೃತಶಿಲೆಯಲ್ಲಿ ಟಾಮ್ವಿನ ಮೂರ್ತಿ ಕೆತ್ತಿಸಿದ್ದು, ಇಡೀ ದೇವಸ್ಥಾನ ನಿರ್ಮಾಣಕ್ಕೆ ಒಟ್ಟು 80 ಸಾವಿರ ರೂ. ಖರ್ಚು ತಗಲಿದೆ ಎಂಬುದಾಗಿ ವರದಿಗಳು ತಿಳಿಸಿವೆ.