ಬೆಂಗಳೂರು, ಏ 06 (DaijiworldNews/HR): ಬೆಂಗಳೂರಿನಲ್ಲಿ 22 ವರ್ಷದ ಯುವಕನನ್ನು ಅಪಹರಿಸಿ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಉಡುಪಿ ನಿವಾಸಿಗಳಾದ ಇಶಾಕ್ (21) ಮತ್ತು ಆಶಿಕ್ (22) ಎಂದು ಗುರುತಿಸಲಾಗಿದ್ದು, ಈ ಆರೋಪಿಗಳು ಗರುಡ 900 ಎಂಬ ಗ್ಯಾಂಗ್ನ ಸದಸ್ಯರಾಗಿದ್ದಾರೆ ಎಂದು ಹೇಳಲಾಗಿದೆ.
ಈ ಇಬ್ಬರ ಬಂಧನದಿಂದ 15 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವಕನನ್ನು ಅಪಹರಿಸಿ ಬೆಂಗಳೂರಿನ ವಿವಿಧೆಡೆ ಕರೆದೊಯ್ದು ಎಟಿಎಂನಿಂದ ಹಣ ಡ್ರಾ ಮಾಡುವಂತೆ ಒತ್ತಾಯಿಸಿ, ಬಳಿಕ ವೈಟ್ಫೀಲ್ಡ್ ಬಳಿ ಯುವಕನನ್ನು ಬಿಡುವ ಮುನ್ನ ಕಾರಿನಲ್ಲಿ ಆತನಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎನ್ನಲಾಗಿದೆ.
ಯುವಕ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಗ್ಯಾಂಗ್ನ ಕಾರು ನೋಂದಣಿ ಸಂಖ್ಯೆಯನ್ನು ಪಡೆದುಕೊಂಡು ಅವರಿಗಾಗಿ ಹುಡುಕಾಟ ಆರಂಭಿಸಿದ್ದರು. ಅದರಂತೆ ಗ್ಯಾಂಗ್ನ ಇಬ್ಬರು ಸದಸ್ಯರಾದ ಇಶಾಕ್ ಮತ್ತು ಆಶಿಕ್ ಅವರ ವಾಹನವನ್ನು ಶಿವರಾಮ ಕಾರಂತ್ ಕ್ಲಬ್ ಬಳಿ ಅಡ್ಡಗಟ್ಟಿದ ಪೊಲೀಸರು ಇಬ್ಬರನ್ನು ಶರಣಾಗುವಂತೆ ಕೇಳಿಕೊಂಡರು. ಆದರೆ ಇಬ್ಬರೂ ಸಬ್ ಇನ್ಸ್ ಪೆಕ್ಟರ್ ಉಮೇಶ್ ಮೇಲೆ ಮಾರಕಾಯುಧದಿಂದ ಹಲ್ಲೆ ನಡೆಸಿದ್ದು, ಇನ್ಸ್ ಪೆಕ್ಟರ್ ಚನ್ನೇಶ್ ಅವರ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಇನ್ನು ಮಾರ್ಚ್ ಆರಂಭದಲ್ಲಿ ಉಡುಪಿಯಲ್ಲಿ ಯುವಕನನ್ನು ದರೋಡೆ ಮಾಡಿದ ತಂಡವು ಬೆಂಗಳೂರಿಗೆ ಪರಾರಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.