ಚಿತ್ರದುರ್ಗ, ಏ 05 (DaijiworldNews/DB): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ದಿನೇದಿನೇ ಹದಗೆಡುತ್ತಿದೆ. ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಪಾದಿಸಿದ್ದಾರೆ.
ಚಿತ್ರದುರ್ಗದ ಹಿರಿಯೂರಿನಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲದ ಕಾರಣ ಕಳೆದ ಎರಡು ವರ್ಷಗಳಿಂದ ಬಂಡವಾಳ ಹೂಡಿಕೆದಾರರು ಬಂದಿಲ್ಲ. ಹಾಗಂದ ಮೇಲೆ ಉದ್ಯೋಗ ಸೃಷ್ಟಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಬಿಜೆಪಿ ಭಾವನಾತ್ಮಕ ವಿಚಾರಗಳನ್ನು ಹಿಡಿದುಕೊಂಡು ರಾಜಕೀಯ ಮಾಡುತ್ತಿದೆ. ರಾಜ್ಯದ ಅಭಿವೃದ್ದಿಗಿಂತ ಚುನಾವಣೆ ಗೆಲ್ಲುವುದೇ ಅವರಿಗೆ ಮುಖ್ಯವಾಗಿದೆ. ಸಾಮಾಜಿಕ ಸಾಮರಸ್ಯ ಕಾಪಾಡುವುದು ಅವರಿಗೆ ಬೇಕಿಲ್ಲ. ಅದಕ್ಕಾಗಿಯೇ ಹಿಜಾಬ್, ಹಲಾಲ್, ಆಝಾನ್ ಮುಂತಾದ ವಿಚಾರಗಳನ್ನಿಟ್ಟುಕೊಂಡು ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಅವರು ಇದೇ ವೇಳೆ ಆರೋಪಿಸಿದರು.
ಧ್ವನಿವರ್ಧಕವನ್ನು ದೇಗುಲಗಳಲ್ಲಿಯೂ ಬಳಸುತ್ತಾರೆ. ಆಝಾನ್ ಬಳಕೆ ನಿನ್ನೆ ಮೊನ್ನೆಯಿಂದ ಶುರುವಾಗಿರುವುದಲ್ಲ. ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿದೆ. ದೇಗುಲ, ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಯಿಂದ ಸಮಸ್ಯೆ ಏನಾಗಿದೆ ಎಂದು ಪ್ರಶ್ನಿಸಿದ ಅವರು ಇದೆಲ್ಲ ಬಿಜೆಪಿಯ ಚುನಾವಣಾ ತಂತ್ರ ಎಂದು ಟೀಕಿಸಿದರು.