ಮಣಿಪುರ, ಏ 05 (DaijiworldNews/DB): ಮಣಿಪುರದ 10 ವರ್ಷದ ಬಾಲಕಿಯೊಬ್ಬಳು ತನ್ನ ತಂಗಿಯನ್ನು ಕಂಕುಳಲ್ಲಿ ಕಟ್ಟಿಕೊಂಡು ಶಾಲೆಗೆ ಹೋಗಿ, ಮಡಿಲಲ್ಲೇ ಮಲಗಿಸಿಕೊಂಡು ಪಾಠ ಕೇಳುವ ವೀಡಿಯೋವೊಂದು ವೈರಲ್ ಆಗಿದ್ದು, ಬಾಲಕಿಯ ಮುಗ್ದತೆಗೆ ನೆಟ್ಟಿಗರು ಮನಸೋತಿದ್ದಾರೆ.
ಮಣಿಪುರದಲ್ಲಿ 4ನೇ ತರಗತಿ ಕಲಿಯುತ್ತಿರುವ ತಮೆಂಗ್ಲಾಂಗ್ ನಿವಾಸಿ ಮೈನಿಂಗ್ ಸಿನ್ಲಿಯು ಪಮೇಯ್ ಎಂಬ ವಿದ್ಯಾರ್ಥಿನಿ ಶಾಲೆಗೆ ತೆರಳುವಾಗ ತನ್ನ ಪುಟ್ಟ ತಂಗಿಯನ್ನೂ ಕಂಕುಳಲ್ಲಿ ಕಟ್ಟಿಕೊಂಡು ಹೋಗುತ್ತಾಳೆ. ಕಾರ್ಮಿಕರಾಗಿರುವ ಈಕೆಯ ಪೋಷಕರಿಗೆ ನಿತ್ಯದ ಕೆಲಸಕ್ಕೆ ತೆರಳಬೇಕಾದ್ದರಿಂದ ಪುಟ್ಟ ಕಂದಮ್ಮನನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲ. ಅದಕ್ಕಾಗಿ ತಂಗಿಯನ್ನು ನಿತ್ಯ ಶಾಲೆಗೆ ಕರೆದೊಯ್ದು ಮಡಿಲಲ್ಲೇ ಮಲಗಿಸಿಕೊಂಡು ಪಾಠ ಕೇಳುತ್ತಾಳೆ ಈ ಪೋರಿ.
ಮಣಿಪುರದ ವಿದ್ಯುತ್, ಅರಣ್ಯ ಮತ್ತು ಪರಿಸರ ಸಚಿವ ಟಿ. ಬಿಸ್ವಜಿತ್ ಸಿಂಗ್ ಅವರು ಈ ಫೋಟೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಬಳಿಕ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ತಂಗಿಯ ಬಗೆಗಿನ ಆಕೆಯ ಕಾಳಜಿ ನನ್ನನ್ನು ಆಶ್ಚರ್ಯಚಕಿತನನ್ನಾಗಿಸಿದೆ. ಪ್ರತಿದಿನ ಆಕೆ ಇದೇ ರೀತಿ ತಂಗಿಯನ್ನು ಶಾಲೆಗೆ ಕರೆದೊಯ್ಯುತ್ತಿರುವುದು ನಡೆಯುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.