ಬೆಂಗಳೂರು, ಏ 05 (DaijiworldNews/DB): ಬೆಂಗಳೂರಿನಲ್ಲಿ ಜಿಮ್ ನಲ್ಲಿ ವ್ಯಾಯಾಮನಿರತಳಾಗಿದ್ದಾಗ ಕುಸಿದು ಬಿದ್ದ ಮಂಗಳೂರು ಮೂಲದ ವಿನಯಾ ಸಾವಿಗೆ ಮೆದುಳಿನ ರಕ್ತನಾಳ ಸಮಸ್ಯೆ ಕಾರಣ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ.
ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲೇಶ್ ಪಾಳ್ಯದ ಜೀಮ್ನಲ್ಲಿ ಮಾ. 26 ರಂದು ವಿನಯಾ ವಿಠಲ್ (35) ಅವರು ವ್ಯಾಯಾಮ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಆದರೆ ಈ ಸಾವಿಗೆ ಹೃದಯಾಘಾತ ಕಾರಣವಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿತ್ತು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿ.ವಿ.ರಾಮನ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಇದೀಗ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ರಕ್ತದೊತ್ತಡದಿಂದಾಗಿ ಮೆದುಳಿನ ರಕ್ತನಾಳಗಳು ಒಡೆದು, ಸೆರೆಬ್ರಲ್ ಹೆಮರೇಜ್ ಸಂಭವಿಸಿದೆ. ಈ ವೇಳೆ ರಕ್ತಸ್ರಾವವಾಗಿ ಕೋಮಾ ಸ್ಥಿತಿಗೆ ತಲುಪಿ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.
ವರದಿ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೆದ್ ಭಾರದ ವಸ್ತುಗಳನ್ನು ಎತ್ತುವಾಗಿ ರಕ್ತದ ಒತ್ತಡ ಉಂಟಾಗಿ ಈ ರೀತಿಯ ಅವಘಡ ಸಂಭವಿಸುತ್ತದೆ ಎಂಬುದಾಗಿ ವೈದ್ಯರು ತಿಳಿಸಿರುವುದಾಗಿ ಹೇಳಿದ್ದಾರೆ.