ಬೆಂಗಳೂರು, ಏ 05 (DaijiworldNews/HR): ಮಸೀದಿಗಳಲ್ಲಿನ ಮೈಕ್ ನಿಷೇಧ ಕುರಿತಂತೆ ಸರ್ಕಾರ ಯಾವುದೇ ಹೊಸ ಕಾನೂನುಗಳನ್ನು ಮಾಡಿಲ್ಲ. ಈ ವಿಚಾರದಲ್ಲಿ ಯಾವುದೇ ಸಂಘಟನೆಯಾಗಲಿ ಶಾಂತಿ-ಸುವ್ಯವಸ್ಥೆ ಹದಗೆಡಿಸಿದರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸರ್ಕಾರದ ದೃಷ್ಟಿಯಲ್ಲಿ ಎಲ್ಲಾ ಜಾತಿ-ಧರ್ಮದವರು ಸಮಾನರು, ನಾವು ಯಾವುದೇ ಹೊಸ ಕಾನೂನುಗಳನ್ನು ಈಗ ಜಾರಿಗೆ ತರುತ್ತಿಲ್ಲ. 2001, 2002 ಹಾಗೂ ಹೈಕೋರ್ಟ್ನ ಆದೇಶಗಳ ಅನುಸಾರ ಜಾರಿಗೆಯಾಗುತ್ತದೆ. ಹಿಂದಿನ ಸರ್ಕಾರಗಳೇ ಈ ನಿಯಮಗಳನ್ನು ಜಾರಿ ಮಾಡಿದ್ದು ಎಂದು ಸಮರ್ಥಿಸಿಕೊಂಡರು.
ಇನ್ನು ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆಗೆ ಸರ್ಕಾರ ಮೊದಲ ಆದ್ಯತೆ ಕೊಟ್ಟಿದ್ದು, ಎಲ್ಲಿಯೂ ಕೂಡ ಯಾರೊಬ್ಬರೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡಿಲ್ಲ. ಸಂಘಟನೆಗಳೇ ಇರಲಿ, ಯಾರೇ ಇರಲಿ ಸರ್ಕಾರದ ದೃಷ್ಟಿಯಲ್ಲಿ ಒಂದೇ ಎಂದಿದ್ದಾರೆ.