ಬೆಂಗಳೂರು, ಏ 05 (DaijiworldNews/DB): ಗಂಟಿ ಮೂಟೆ ಕಟ್ಟಿಕೊಂಡು ಹೈದರಾಬಾದ್ ಗೆ ಬನ್ನಿ ಎಂದ ತೆಲಂಗಾಣ ಸಚಿವ ಕೆಟಿಆರ್ ಅವರಿಗೆ ಡಿ.ಕೆ. ಶಿವಕುಮಾರ್ ಅವರು ನಿನ್ನೆಯಷ್ಟೇ ಸವಾಲು ಹಾಕಿದ್ದರು. ಇದೀಗ ಆಕಾಶ ಅಳೆಯುವುದಕ್ಕೆ ಮುನ್ನ ಅಂಗಳ ಅಳೆಯುವುದನ್ನು ಕಲಿತುಕೊಳ್ಳಿ ಎಂದು ಬಿಜೆಪಿಯೂ ಕೆಟಿಆರ್ ಗೆ ತಿರುಗೇಟು ನೀಡಿದೆ.
ರಾಜ್ಯ ಬಿಜೆಪಿ ಘಟಕವು ಟ್ವೀಟ್ ಮಾಡಿ, ಗಂಟು-ಮೂಟೆ ಕಟ್ಟಿಕೊಂಡು ಹೈದರಾಬಾದಿಗೆ ಬನ್ನಿ ಎಂದು ಉದ್ಯಮಿಗಳಿಗೆ ಸವಾಲು ಹಾಕುವ ಕೆಟಿಆರ್ ಅವರೇ, ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ ನೀವು ಎಷ್ಟನೇ ಸ್ಥಾನದಲ್ಲಿದ್ದೀರಿ? ಕರ್ನಾಟಕಕ್ಕೂ ನಿಮಗೂ ಇರುವ ಅಂತರ ಎಷ್ಟು ಎಂಬುದನ್ನು ಮೊದಲು ವಿಶ್ಲೇಷಿಸಿ.
ಆಕಾಶ ಅಳೆಯುವುದಕ್ಕೆ ಮುನ್ನ ಅಂಗಳ ಅಳೆಯುವುದನ್ನು ಕಲಿತುಕೊಳ್ಳಿ ಎಂದು ಹೇಳಿದೆ.
ಕೋರಮಂಗಲದಲ್ಲಿ ಹಲವು ಉದ್ಯಮಗಳು ಸರ್ಕಾರಕ್ಕೆ ದೊಡ್ಡ ಮೊತ್ತದ ತೆರಿಗೆ ಪಾವತಿ ಮಾಡುತ್ತಿದ್ದರೂ, ಇಲ್ಲಿ ರಸ್ತೆ ನಾದುರಸ್ತಿಯಲ್ಲಿದೆ, ವಿದ್ಯುತ್ ಆಗಾಗ ಕಣ್ಣಾಮುಚ್ಚಾಲೆಯಾಡುತ್ತದೆ. ನೀರು ಪೂರೈಕೆ, ಫುಟ್ ಪಾತ್ ವ್ಯವಸ್ಥೆ ಸರಿಯಾಗಿಲ್ಲ ಎಂದು ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಖಾತಾಬುಕ್ನ ಸಂಸ್ಥಾಪಕ ರವೀಶ್ ನರೇಶ್ ಎಂಬುವರು ಮಾರ್ಚ್ 31ರಂದು ಟ್ವೀಟಿಸಿದ್ದರು. ಇದನ್ನು ರೀಟ್ವೀಟ್ ಮಾಡಿದ ತೆಲಂಗಾಣ ಸಚಿವ ಕೆ.ಟಿ. ರಾಮರಾವ್, ನೀವು ಗಂಟು ಮೂಟೆ ಕಟ್ಟಿಕೊಂಡು ಹೈದರಾಬಾದ್ ಗೆ ಬನ್ನಿ. ಇಲ್ಲಿ ಮೂಲಸೌಕರ್ಯ ಚೆನ್ನಾಗಿದ್ದು, ಎಲ್ಲಾ ಅಗತ್ಯ ಸೌಕರ್ಯಗಳನ್ನು ಹೊಂದಿದೆ. ನವ್ಯೋದ್ಯಮಕ್ಕೆ ಹೈದರಾಬಾದ್ ಪೂರಕವಾಗಿದೆ ಎಂದಿದ್ದರು.
ಕೆಟಿಆರ್ ನ ಈ ಟ್ವೀಟ್ ನ್ನು ಡಿ.ಕೆ. ಶಿವಕುಮಾರ್ ರೀಟ್ವೀಟ್ ಮಾಡಿ, ಬೆಂಗಳೂರಿಗಿಂತ ತೆಲಂಗಾಣ ದಲ್ಲಿ ವ್ಯವಸ್ಥೆ ಚೆನ್ನಾಗಿದೆ ಎಂದು ನೀವು ಸವಾಲು ಹಾಕುತ್ತಿದ್ದೀರಿ. ಈ ಸವಾಲನ್ನು ಸ್ವೀಕರಿಸುತ್ತೇನೆ. 2023ರಲ್ಲಿ ಕಾಂಗ್ರೆಸ್ ನಿಶ್ಚಿತವಾಗಿ ಅಧಿಕಾರಕ್ಕೆ ಬರಲಿದೆ. ಆಗ ಬೆಂಗಳೂರಿನ ವೈಭವ ಮರುಕಳಿಸುವಂತೆ ಮಾಡುತ್ತೇವೆ. ಅಲ್ಲದೆ, ದೇಶದ ಮಾದರಿ ನಗರವನ್ನಾಗಿ ರೂಪಿಸುತ್ತೇವೆ ಎಂದಿದ್ದರು. ಇದನ್ನು ಮತ್ತೆ ರೀಟ್ವೀಟ್ ಮಾಡಿದ್ದ ಕೆಟಿಆರ್, ನಿಮ್ಮ ಚಾಲೆಂಜ್ ನ್ನು ನಾನೂ ಸ್ಚೀಕರಿಸಿದ್ದು, ಉದ್ಯೋಗ ಸೃಷ್ಟಿಯಲ್ಲಿ ಉಭಯ ರಾಜ್ಯಗಳ ಮಧ್ಯೆ ಆರೋಗ್ಯಕರ ಸ್ಪರ್ಧೆಯನ್ನು ಮುನ್ನಡೆಸೋಣ ಎಂದಿದ್ದರು.
ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ ಅವರೂ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದರು.