ಬೆಂಗಳೂರು, ಏ 05 (DaijiworldNews/DB): ಮಕ್ಕಳಲ್ಲಿ ಸಾತ್ವಿಕ ಸಂಸ್ಕಾರವನ್ನು ಬೆಳೆಸೋಣ. ಅದರ ಹೊರತಾಗಿ ಇನ್ನೊಂದು ಧರ್ಮದ ನಂಬಿಕೆಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದಲ್ಲಿ ಎದ್ದಿರುವ ಆಝಾನ್ ಗದ್ದಲದ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಅವರು, ನಸುಕಿನಲ್ಲಿ ಸುಪ್ರಭಾತ ಮತ್ತು ಅಲ್ಲಾಹ್ ಕೂಗುವ ಪರಿಪಾಠ ನಿನ್ನೆ-ಇಂದಿನದಲ್ಲ. ಅನಾದಿ ಕಾಲದಿಂದಲೂ, ಧರ್ಮಗಳು ಹುಟ್ಟಿದಾಗಿನಿಂದಲೂ ನಡೆದುಕೊಂಡೇ ಬಂದಿವೆ ಎಂದಿದ್ದಾರೆ.
ನಮ್ಮ ಮನೆಗಳಲ್ಲೂ ಬೆಳಗ್ಗೆಯೇ ಪೂಜೆ ನೆರೆವೇರಿಸಿ ಮಂಗಳಕರವಾದ ಘಂಟೆ ಭಾರಿಸುವುದನ್ನು ನಿತ್ಯವೂ ಕೇಳುತ್ತೇವೆ. ದೈವಕ್ಕೆ ಪ್ರಿಯವಾದ ಆ ಘಂಟೆಯ ಸದ್ದು ಯಾರಿಗೂ ಕಿರಿಕಿರಿ ಉಂಟು ಮಾಡಿಲ್ಲ. ಅಲ್ಲದೆ, ದೇವಾಲಯಗಳಲ್ಲಿ ಮಹಾ ಮಂಗಳಾರತಿ ಸಂದರ್ಭಗಳಲ್ಲಿ ಢಮರುಗ, ಜಾಗಟೆ, ಘಂಟೆ ಇತ್ಯಾದಿಗಳನ್ನು ಬಾರಿಸುವ ಸಂಪ್ರದಾಯ ಇದ್ದೇ ಇದೆ. ಶಿವನಿಗೆ ಪ್ರಿಯವಾದ ಢಮರುಗ ಯಾರಿಗಾದರೂ ಕಿರಿಕಿರಿ ಮಾಡಿದೆಯೇ? ಎಂದವರು ಪ್ರಶ್ನಿಸಿದ್ದಾರೆ.
ಹಿಂದುಗಳಾದ ನಾವು ನಮ್ಮ ದೇವರಿಗೆ ಭಕ್ತಿಯಿಂದ ಸಲ್ಲಿಸುವ ಸೇವೆಗಳಿಗೆ ಮುಸ್ಲಿಮರು ಸೇರಿ ಅನ್ಯ ಧರ್ಮದ ಯಾರಿಂದಲೂ ಆಕ್ಷೇಪ ಇಲ್ಲದಿರುವಾಗ ಮಸೀದಿಗಳ ಧ್ವನಿವರ್ಧಕಗಳ ಬಗ್ಗೆ ತಕರಾರು ತೆಗೆಯುವುದು ಏಕೆ? ಅಗತ್ಯ ಬಿದ್ದರೆ, ಶಬ್ದದ ಪ್ರಮಾಣವನ್ನು ವೈಜ್ಞಾನಿಕವಾಗಿ ಚಿಂತಿಸಿ ಕಡಿಮೆ ಮಾಡಲಿ. ಆ ಬಗ್ಗೆ ಮುಸ್ಲಿಂ ಧರ್ಮಗುರುಗಳೂ ಆಲೋಚನೆ ಮಾಡಲಿ ಎಂದವರು ಇದೇ ವೇಳೆ ಸಲಹೆ ನೀಡಿದ್ದಾರೆ.
ಭಾರತೀಯ ಸಂವಿಧಾನವು ಜಗತ್ತಿನ ಸರ್ವಶ್ರೇಷ್ಠ ಸಂವಿಧಾನ. ಅದರಲ್ಲಿ ಅಡಕವಾಗಿರುವ ಸಹಿಷ್ಣುತೆಯ ಆಶಯಕ್ಕೆ ಧಕ್ಕೆ ತರುವುದು ಬೇಡ. ಸಂಸತ್ತಿನಲ್ಲಿರುವ ಸಂವಿಧಾನ ಪ್ರತಿಗೆ ಶಿರಬಾಗಿ ನಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಆಶಯವನ್ನು ಹಿಂದೂ ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ನಾಯಕರು ಮೋದಿ ಅವರ ಮೇಲ್ಪಂಕ್ತಿಯನ್ನು ಗೌರವಿಸಬೇಕು ಎಂದು ಎಚ್ ಡಿಕೆ ತಿಳಿಸಿದ್ದಾರೆ.
ದೇವಾಲಯಗಳಲ್ಲಿ ನಡೆಯುತ್ತಿದ್ದ ನಿತ್ಯ ಭಜನೆ, ಸುಪ್ರಭಾತ ವೇಳೆ ಕೇಳಿ ಬರುತ್ತಿದ್ದ ಶ್ಲೋಕ, ಕೀರ್ತನೆ, ಭಜನೆಗಳು ಕ್ರಮೇಣ ಕಣ್ಮರೆಯಾಗಿವೆ. ನಾವೆಲ್ಲರೂ ಸೇರಿ ಅವುಗಳ ಪುನರುದ್ಧಾರ ಮಾಡೋಣ ಎಂದು ಟ್ವೀಟಿಸಿದ್ದಾರೆ.
ದೇವಾಲಯಗಳಲ್ಲಿ ಸೂರ್ಯೋದಯಕ್ಕೆ ಮುನ್ನವೇ ಸುಪ್ರಭಾತ ಕೇಳಿಸುವುದು, ಮಸೀದಿಗಳಲ್ಲಿ ಅಲ್ಲಾಹ್ ಕೂಗುವುದನ್ನು ನಾನು ಬಾಲ್ಯದಿಂದಲೂ ಕೇಳಿಕೊಂಡೇ ಬೆಳೆದಿದ್ದೇನೆ. ನಮ್ಮ ಊರಿನಲ್ಲಿ ನಿತ್ಯವೂ ನಾನು ಕೇಳುತ್ತಿದ್ದ ಸದ್ದುಗಳಾಗಿದ್ದವು ಎಂದು ಇದೇ ವೇಳೆ ಸ್ಮರಿಸಿಕೊಂಡರು.