ನವದೆಹಲಿ, ಏ 05 (DaijiworldNews/DB): ಉಚಿತ ಜನಪರ ಯೋಜನೆ ನೀಡುವುದನ್ನು ಮುಂದುವರಿಸಿದರೆ ಭಾರತವೂ ಶ್ರೀಲಂಕಾದಂತೆ ಆರ್ಥಿಕ ಮುಗ್ಗಟ್ಟು ಎದುರಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಭೆಯಲ್ಲಿ ಕೆಲವು ಹಿರಿಯ ಅಧಿಕಾರಿಗಳ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಅಧಿಕೃತ ಕಚೇರಿಯಲ್ಲಿ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅಧಿಕಾರಿಗಳು ಮಾತನಾಡಿದರು.
ವಿವಿಧ ರಾಜ್ಯಗಳಲ್ಲಿ ಉಚಿತ ಜನಪರ ಯೋಜನೆಗಳು ಜಾರಿಯಲ್ಲಿವೆ, ಇನ್ನೂ ಜಾರಿಯಾಗುತ್ತಿವೆ. ಕೆಲವು ರಾಜ್ಯಗಳಲ್ಲಿ ಉಚಿತ ಯೋಜನೆಗಳನ್ನು ಜಾರಿಗೊಳಿಸಿದರೆ ಆರ್ಥಿಕ ಸುಸ್ಥಿರತೆಗೆ ಭಂಗ ಬರಬಹುದು. ಶ್ರೀಲಂಕಾದಲ್ಲಿ ಪ್ರಸ್ತುತ ಆರ್ಥಿಕ ಸ್ಥಿತಿ ಬಿಗಡಾಯಿಸಿದ್ದು, ಅಗತ್ಯ ವಸ್ತುಗಳಿಗೂ ಜನ ಪರದಾಡುವಂತಾಗಿದೆ. ಭಾರತದಲ್ಲಿ ಉಚಿತ ಯೋಜನೆಗಳನ್ನು ನೀಡುತ್ತಾ ಹೋದರೆ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ಆರೋಗ್ಯ, ಶಿಕ್ಷಣ ಕ್ಷೇತ್ರಗಳಿಗೆ ಕಾಯ್ದಿರಿಸಲಾದ ಅನುದಾನಕ್ಕಿಂತಲೂ ಇತರ ಉಚಿತ ಯೋಜನೆಗಳಿಗೆ ತೆಗೆದಿಡಲಾಗಿದೆ. ಅಲ್ಲದೆ, ಕೆಲ ರಾಜ್ಯಗಳು ಈಗಲೇ ಆರ್ಥಿಕ ಸಂಕಷ್ಟಕ್ಕೆ ತೆರೆದುಕೊಳ್ಳುತ್ತಿವೆ. ಜನಪರವಾಗಿರಲು ಪ್ರಕಟಿಸುವ ಇಂತಹ ಯೋಜನೆಗಳಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡರ ಮೇಲೂ ಹಣದ ಬಿಕ್ಕಟ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಇದು ಮುಂದೆ ದೊಡ್ಡ ಸಮಸ್ಯೆಗೆ ದೇಶವನ್ನು ಕೊಂಡೊಯ್ಯಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ, ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಮೊದಲಾದವರು ಉಪಸ್ಥಿತರಿದ್ದರು.