ಕಾರವಾರ, ಏ 04 (DaijiworldNews/DB): ರಾಹುಲ್ ಗಾಂಧಿ ಅವರು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪ್ರವಾಸ ಕೈಗೊಂಡರೆ ಅವರ ಖರ್ಚನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಕುಮಟಾ ತಾಲೂಕಿನ ಗೋಕರ್ಣ ಬಳಿಯ ಮಾದನಗೇರಿಯಲ್ಲಿ ಮಾತನಾಡಿದಅವರು, ರಾಹುಲ್ ಗಾಂಧಿ ಎಲ್ಲೆಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗುತ್ತಾರೋ, ಅಲ್ಲೆಲ್ಲ ಕಾಂಗ್ರೆಸ್ ಸರ್ವನಾಶವಾಗಿದೆ. ಹೀಗಾಗಿ ಅವರು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಪ್ರವಾಸ ಕೈಗೊಂಡರೆ ನಾನು ಅದರ ಸಂಪೂರ್ಣ ಖರ್ಚನ್ನು ನಿಭಾಯಿಸುತ್ತೇನೆ ಎಂದರು.
ತ್ರಿಮೂರ್ತಿಗಳಾದ ಸಿದ್ದರಾಮಯ್ಯ, ಡಿಕೆಶಿ ಮತ್ತು ಎಚ್ ಡಿಕೆ ಅವರೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಕು. ಅವರ ಪರಿಶ್ರಮದಿಂದ ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿ ಜಯಗಳಿಸಿ ಅಧಿಕಾರಕ್ಕೆ ಬರುತ್ತದೆ ಎಂದವರು ಇದೇ ವೇಳೆ ವ್ಯಂಗ್ಯವಾಡಿದರು. ಈ ಮೂವರು ನಾಯಕರಿಗೂ ಮುಸಲ್ಮಾನರನ್ನು ಎದುರು ಹಾಕಿಕೊಳ್ಳುವ ತಾಕತ್ತಿಲ್ಲ. ವೋಟ್ ಬ್ಯಾಂಕ್ ಕಳೆದುಕೊಳ್ಳುವ ಭೀತಿ ಅವರಲ್ಲಿದೆ. ಕೋರ್ಟ್ ಆದೇಶವಿದ್ದರೂ ಪ್ರತಿಭಟಿಸಿದವರನ್ನು ಬಂಧಿಸಿ ಎಂದು ಹೇಳುವ ತಾಕತ್ತು ಸಿದ್ಧರಾಮಯ್ಯ ಅವರಿಗೆ ಎಲ್ಲಿಂದ ಬರಬೇಕು ಎಂದವರು ಇದೇ ವೇಳೆ ಪ್ರಶ್ನಿಸಿದರು.