ಹುಬ್ಬಳ್ಳಿ, ಏ 04 (DaijiworldNews/DB): ಕಿಡಿಗೇಡಿಗಳು ಜೇನುಗೂಡಿಗೆ ಕಲ್ಲು ಹೊಡೆದ ಪರಿಣಾಮ ಎಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಮತ್ತು ಶಾಲೆಯಲ್ಲಿದ್ದ ಶಿಕ್ಷಕರ ಮೇಲೆ ಜೇನು ದಾಳಿ ನಡೆಸಿದ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
ಕೇಶ್ವಾಪುರದ ಸೇಂಟ್ ಮೈಕಲ್ ಶಾಲೆಯಲ್ಲಿ ವಿದ್ಯಾರ್ಥಿಗಳು ಸೋಮವಾರ ಎಸೆಸ್ಸೆಲ್ಸಿ ಗಣಿತ ಪರೀಕ್ಷೆ ಬರೆಯುತ್ತಿದ್ದ ವೇಳೆ ಏಕಾಏಕಿ ಜೇನು ನೊಣಗಳು ಪರೀಕ್ಷಾ ಕೇಂದ್ರಕ್ಕೆ ದಾಳಿ ನಡೆಸಿವೆ. ಅಲ್ಲದೆ, ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕಚ್ಚಿ ಗಾಯಗೊಳಿಸಿವೆ. ಇದರಿಂದ ಆತಂಕಗೊಂಡ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಲ್ಲಿಂದಲೇ ಎದ್ದು ದಿಕ್ಕಾಪಾಲಾಗಿ ಓಡಿದ್ದಾರೆ.
ಇಬ್ಬರು ವಿದ್ಯಾರ್ಥಿಗಳು, ಮುಖ್ಯ ಶಿಕ್ಷಕ, ದೈಹಿಕ ಶಿಕ್ಷಣ ಶಿಕ್ಷಕ, ಓರ್ವ ಪೊಲೀಸ್ ಸೇರಿದಂತೆ ಐವರಿಗೆ ಜೇನು ಕಚ್ಚಿದ್ದು, ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿಡಿಗೇಡಿಗಳ್ಯಾರೋ ಜೇನುಗೂಡಿಗೆ ಕಲ್ಲು ಎಸೆದ ಪರಿಣಾಮ ಘಟನೆ ಸಂಭವಿಸಿದೆ ಎನ್ನಲಾಗಿದೆ.