ನವದೆಹಲಿ, ಏ 04 (DaijiworldNews/DB): ಇಂಧನ ದರ ಏರಿಕೆ ಸಂಬಂಧಿಸಿದಂತೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಪ್ರಧಾನ ಮಂತ್ರಿ ಜನಧನ್ ಲೂಟಿ ಯೋಜನೆ ಎಂಬುದಾಗಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಧಾನ ಮಂತ್ರಿ ಜನಧನ್ ಯೋಜನೆಯನ್ನು ಲೂಟಿ ಯೋಜನೆ ಎಂಬುದಾಗಿ ಕರೆದಿದ್ದಾರೆ. ಅಲ್ಲದೆ, ಯುಪಿಎ ಸರ್ಕಾರ ಇದ್ದಾಗ 2014ರ ಮೇ ತಿಂಗಳಲ್ಲಿದ್ದ ಇಂಧನ ಬೆಲೆ ಮತ್ತು ಇಂದಿನ ದರವನ್ನು ತುಲನೆ ಮಾಡಿ ಆಗ ಮತ್ತು ಈಗ ಎಷ್ಟು ವ್ಯತ್ಯಾಸವಾಗಿದೆ ಎಂದು ಗ್ರಾಫಿಕ್ಸ್ ಮೂಲಕ ತೋರಿಸಿದ್ದಾರೆ.
ಸ್ಕೂಟರ್, ಬೈಕ್ ಗಳಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಲು ಅಂದು 714 ರೂ.ಗಳಿತ್ತು. ಇವತ್ತು 1038 ರೂ. ಆಗಿದೆ. 324 ರೂ.ಗಳಷ್ಟು ದರ ಏರಿಕೆಯಾಗಿದೆ. ಕಾರಿಗೆ ಫುಲ್ ಟ್ಯಾಂಕ್ ಪೆಟ್ರೋಲ್, ಡೀಸೆಲ್ ಹಾಕಲು ಅಂದು 2856 ರೂ.ಗಳಿದ್ದರೆ ಇಂದು 4152 ರೂ.ಗಳಾಗುವ ಮೂಲಕ 1296 ರೂ.ಗಳಷ್ಟು ಏರಿಕೆಯಾಗಿದೆ. ಟ್ರಾಕ್ಟರ್ ಇಂಧನಕ್ಕೆ ಅಂದು ಫುಲ್ ಟ್ಯಾಂಕ್ ಗೆ 2749 ರೂ.ಗಳಿದ್ದರೆ, ಇಂದು 4563 ವ್ಯಯಿಸಬೇಕಾಗಿದೆ. 1814 ರೂ.ಗಳಷ್ಟು ಹೆಚ್ಚುವರಿ ಹಣ ತೆರಬೇಕಾಗಿದೆ. ಟ್ರಕ್ ಗೆ ಫುಟ್ ಟ್ಯಾಂಕ್ ಇಂಧನಕ್ಕೆ ಯುಪಿಎ ಅವಧಿಯಲ್ಲಿ 11456 ರೂ.ಗಳಿದ್ದರೆ, ಇಂದು 19014 ರೂ.ಗಳಾಗಿವೆ. ಒಟ್ಟು 7558 ರೂ.ಗಳಷ್ಟು ದರ ಏರಿಕೆಯಾಗಿದೆ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.