ಬೆಂಗಳೂರು, ಏ 04 (DaijiworldNews/DB): ಜೆಡಿಎಸ್ ಪಕ್ಷದ ಮಿಶನ್-123 ಕಾರ್ಯ ಯೋಜನೆಯನ್ನು ಸರಣಿ ಟ್ವೀಟ್ ಮಾಡುವುದರ ಮೂಲಕ ಬಿಜೆಪಿ ಲೇವಡಿ ಮಾಡಿದೆ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರನ್ನು ಮಾಜಿ ಲಕ್ಕಿಡಿಪ್ ಸಿಎಂ ಎಂದು ಜರೆಯುವುದನ್ನು ಮುಂದುವರೆಸಿದೆ.
ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ನಿಮ್ಮ ಪಕ್ಷದ ಮಿಶನ್-123 ಗೆ ತೆನೆ ಹೊರಬೇಕೆಂದರೆ ಒಬ್ಬರೇ ಪಕ್ಷಕ್ಕೆ ಸೇರಬೇಕೋ, ಕುಟುಂಬ ಸಮೇತರಾಗಿ ಸೇರಬೇಕೋ? ಏಕೆಂದರೆ ಮಾಜಿ ಲಕ್ಕಿಡಿಪ್ ಸಿಎಂ ಎಚ್ ಡಿಕೆಯವರ ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಮಾತ್ರ ಅವಕಾಶ. ಇನ್ನು ಕೆಲವು ಕಡೆ ಪ್ರಚಾರ ಮಾಡುವುದಕ್ಕೂ ಕುಟುಂಬದವರು ಮಾತ್ರ ಉಳಿಯುವುದಲ್ಲವೇ? ಎಂದು ಪ್ರಶ್ನಿಸಿದೆ.
ಬಹುಮತ ಪಡೆಯುತ್ತೇವೆ ಎನ್ನುವ ಮೂಲಕ ಮಾಜಿ ಲಕ್ಕಿಡಿಪ್ ಸಿಎಂ ಈಗ ಮತ್ತೊಂದು ಗಾಳಿಪಟ ಸಿದ್ದಪಡಿಸುತ್ತಿದ್ದಾರೆ, ಇದು ಟಿಕೆಟ್ ಆಕಾಂಕ್ಷಿಗಳನ್ನು ಸೆಳೆಯುವ ತಂತ್ರವೇ? ಸೂತ್ರವಿಲ್ಲದ ಗಾಳಿಪಟದ ಹಾರಾಟ ಹೇಗಿರುತ್ತದೆ ಎಂದು ಮಾಜಿ ಶಾಸಕ ಕೋನರೆಡ್ಡಿಯವರನ್ನು ಕೇಳಿದರೆ ಉತ್ತರ ಸಿಗಬಹುದೇ? ಅಥವಾ ರಾಜ್ಯಸಭೆಯ ಕನಸು ಕಂಡ ಫಾರೂಕ್ ವಿವರಿಸಬಹುದೇ? ಎಂದೂ ಬಿಜೆಪಿ ಪ್ರಶ್ನೆ ಮಾಡಿದೆ.
ನಮ್ಮ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದರೆ ಗೆಲ್ಲುವುದಿಲ್ಲ ಎಂದು ಮಾಜಿ ಸಿಎಂ ಹೇಳಿದ್ದರು. ಅಲ್ಲಿಗೆ, ಮಿಶನ್-123 ನಲ್ಲಿ ಕುಟುಂಬ ವರ್ಗದವರೇ ಸಿಂಹಪಾಲು ಪಡೆಯುವುದು ಸ್ಪಷ್ಟ. ಅಂದಹಾಗೆ, ನಿಮ್ಮ ಕುಟುಂಬ ವರ್ಗದಿಂದ ಯಾರಾದರೂ ಬಿಟ್ಟು ಹೋಗಿದ್ದರೆ ಅವರಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡುತ್ತೀರಿ? ಎಂದು ಸರಣಿ ಪ್ರಶ್ನೆಗಳನ್ನು ಬಿಜೆಪಿ ಎಚ್ ಡಿಕೆಗೆ ಎಸೆದಿದೆ.
ಮುಂದಿನ ಚುನಾವಣೆಯಲ್ಲಿ ಮಿಶನ್-123 ಎನ್ನುತ್ತಿದ್ದೀರಿ. ನಿಮ್ಮ ಕುಟುಂಬದ ಎಲ್ಲಾ ಕವಲುಗಳಿಗೂ ಈಗಾಗಲೇ ಅವಕಾಶ ಕಲ್ಪಿಸಿದ್ದೀರಿ. ಮುಂದಿನ ಚುನಾವಣೆಗೆ ಇನ್ನು ಯಾರ್ಯಾರು ನಿಮ್ಮ ಮನೆತನದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ? ಎಂದು ಬಿಜೆಪಿ ಟ್ವೀಟ್ ಮಾಡಿ ಕೇಳಿದೆ.