ಬೆಂಗಳೂರು, ಏ 04 (DaijiworldNews/MS): ರಾಜ್ಯದಲ್ಲಿ ಈಗಾಗಲೇ ಖಾದ್ಯತೈಲ, ಸಿಲಿಂಡರ್ ಸೇರಿದಂತೆ ದಿನನಿತ್ಯದ ಬಳಕೆ ಸಾಮಾಗ್ರಿಗಳು ಸೇರಿ ಎಲ್ಲದುದರ ಬೆಲೆ ಏರಿಕೆಯಾಗಿದ್ದು, ಈ ನಡುವೆ ಕರ್ನಾಟಕದಲ್ಲಿ ವಿದ್ಯುತ್ ದರವೂ ಏರಿಕೆಯಾಗಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರ ಪ್ರತಿ ಯೂನಿಟ್ ಗೆ ಸರಾಸರಿ 35ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳಿಗೂ (ಎಸ್ಕಾಂ) ಸರಾಸರಿ 35 ಪೈಸೆ ಹೆಚ್ಚಳ ಮಾಡಿ ಹಂಗಾಮಿ ಅಧ್ಯಕ್ಷ ಮಂಜುನಾಥ್ ಸೋಮವಾರ ಆದೇಶ ಹೊರಡಿಸಿದರು.
ಎಸ್ಕಾಂಗಳ ಬೇಡಿಕೆ ಪರಿಗಣಿಸಿ ಬೆಲೆ ಏರಿಕೆಗೆ ಒಪ್ಪಿಗೆ ನೀಡಲಾಗಿದೆ. ಪ್ರತಿ ಯೂನಿಟ್ಗೆ 5 ಪೈಸೆಗಳಷ್ಟು ಇಂಧನ ಶುಲ್ಕಗಳ ಹಾಗೂ ಪ್ರತಿ ಹೆಚ್.ಪಿ/ಕಿ.ವಾ/ಕೆ.ವಿ.ಎ.ಗೆ ರೂ.10 ರಿಂದ ರೂ. 30 ರವರೆಗೆ ನಿಗದಿತ ಶುಲ್ಕಗಳ ಹೆಚ್ಚಳವನ್ನು ಅನುಮೋದಿಸಲಾಗಿದೆ. ಇದರೊಂದಿಗೆ ಪ್ರತಿ ಯೂನಿಟ್ ದರ 35 ಪೈಸೆಯಷ್ಟಾಗಿರುತ್ತದೆ (ಶೇ.4.33 ಹೆಚ್ಚಳ)’ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಲ ಎಸ್ಕಾಂಗಳೂ ಸರಾಸರಿ 1.85ರೂ. ಹೆಚ್ಚಳಕ್ಕೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದವು. ಏಪ್ರಿಲ್ 1 ರಿಂದಲೇ ನೂತನ ದರ ಜಾರಿಗೆ ಬರಲಿದೆ.