ಬೆಂಗಳೂರು, ಏ 04 (DaijiworldNews/DB): ಎಚ್ ಡಿಕೆ ಗಾಳಿಪಟ ರಾಜಕಾರಣಿ. ಗಾಳಿಪಟದ ವ್ಯಕ್ತಿತ್ವ ಹೊಂದಿರುವ ರಾಜಕಾರಣಿ ರಾಜ್ಯದಲ್ಲಿ ಬೇರೆ ಯಾರಿಲ್ಲ. ಸ್ವಂತಿಕೆ ಎಂಬುದು ಅವರಲ್ಲಿಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಕಳೆದ ಕೆಲ ದಿನಗಳಿಂದ ಬಿಜೆಪಿ ವಿರುದ್ಧ ಮಾತನಾಡುತ್ತಿರುವ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕವು, ಆವ ಕಡೆ ಹಾರುವುದೋ! ಆವ ಕಡೆ ತಿರುಗುವುದೋ? ಆವಾಗಳಾವ ಕಡೆಗೆರಗುವುದೋ ಹಕ್ಕಿ! ಎಂಬಂತಿದೆ ಎಚ್ಡಿಕೆ ರಾಜಕೀಯ ಧೋರಣೆ ಎಂದು ಕಗ್ಗದ ಸಾಲುಗಳ ಮೂಲಕ ತಿವಿದಿದೆ.
ಸ್ವಂತಿಕೆ ಇಲ್ಲದವರು ವಾಜಪೇಯಿಯಂತಹ ಅಜಾತಶತ್ರುಗಳನ್ನೂ ಟೀಕಿಸುತ್ತಾರೆ. ದಾರ್ಶನಿಕನ ಸೋಗಲ್ಲಿದ್ದರೂ ನಿಮ್ಮ ಹಿಂದೆ ಪ್ರತ್ಯೇಕ ಲೆಕ್ಕಾಚಾರವಿದೆ ಎಂಬುದು ತಿಳಿಯದ ಮುಗ್ದರು ಯಾರಿಲ್ಲ.ನೀವೆಷ್ಟೇ ದಾರ್ಶನಿಕನ ಸೋಗು ಹಾಕಿದರೂ ಅದರ ಹಿಂದಿರುವುದು ಪ್ರತ್ಯೇಕ ಲೆಕ್ಕಾಚಾರವೇ. ನಿಮ್ಮಂತವರ ಯೂಟರ್ನ್ ನೀತಿಗಾಗಿಯೇ ಕಗ್ಗದಲ್ಲಿ ಸಾಲೊಂದು ರಚಿತವಾಗಿದೆ. ಬಾನೊಳಿರುವುದೆ ಪಕ್ಷಿ ಪಾರ್ವ ದಾರಿಯ ನಕ್ಷೆ..? ಮೀನು ನೀರೊಳು ನುಸುಳೆ ಪಥನಿಯಮವಿಹುದೆ..? ಏನೊ ಜೀವನವನೆಳೆವುದೇನೊ ನೂಕುವುದದನು. ನೀನೊಂದು ಗಾಳಿಪಟ ಮಂಕುತಿಮ್ಮ.. ಎಂದು ಡಿವಿಜಿ ಅವರ ಸಾಲುಗಳ ಬರೆದು ಬಿಜೆಪಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಲೇವಡಿ ಮಾಡಿದೆ.
ಅಲ್ಲದೆ, ಇನ್ನೊಂದು ಸಾಲುಗಳಲ್ಲಿ ಅಡಿಜಾರಿ ಬೀಳುವುದು, ತಡವಿಕೊಂಡೇಳುವುದು । ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು ॥ ದುಡುಕಿ ಮತಿದಪ್ಪುವುದು, ತಪ್ಪನೊಪ್ಪೆನ್ನುವುದು.. ಮಾಜಿ ಲಕ್ಕಿಡಿಪ್ ಸಿಎಂ ಅವರಿಗೆ ಇದೇ ಬದುಕು ತಾನೇ ಎಂದು ಬಿಜೆಪಿ ಟೀಕಿಸಿದೆ.
ಅಲ್ಲದೆ, ಇನ್ನೊಂದು ಟ್ವೀಟ್ ನಲ್ಲಿ ಜೆಡಿಎಸ್ ಮಿಷನ್-123 ಎಂಬ ಸಂಕಲ್ಪ ಮಾಡಿದೆ. ಇದರರ್ಥ ಜೆಡಿಎಸ್ 123 ಸ್ಥಾನ ಗಳಿಸಲಿದೆ ಎಂದೋ ಅಥವಾ ಯಾವ ಪಕ್ಷವನ್ನೂ 123 ಸ್ಥಾನ ದಾಟಲು ಬಿಡುವುದಿಲ್ಲ ಎಂದೋ? ಅತಂತ್ರದ ತಂತ್ರ ಹೂಡಿ ಮತ್ತೆ ಸಾಂದರ್ಭಿಕ ಶಿಶು ಎನಿಸಿಕೊಳ್ಳುವ ತವಕವೇ ಎಂದು ಪ್ರಶ್ನಿಸಿದೆ.