ಬೆಂಗಳೂರು, ಏ 04 (DaijiworldNews/DB): ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಸೇರಿದ ನಾಲ್ಕು ಕಾರುಗಳನ್ನು ಜಫ್ತಿ ಮಾಡಲಾಗಿದೆ.
ಹೂಡಿಕೆ ಮಾಡಿದ ಹಣಕ್ಕೆ ದುಪ್ಪಟ್ಟು ಲಾಭಾಂಶ ನೀಡುವುದಾಗಿ ಜನರಿಂದ ಹಣ ಪಡೆದು ಬಳಿಕ ವಂಚನೆ ಎಸಗಿದ್ದ ಐಎಂಎ ಕಂಪೆನಿಯ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಕಂಪೆನಿಯ ಪರವಾಗಿ ಪ್ರಚಾರ ಮಾಡಿದ ಆರೋಪ ಬೇಗ್ ಮೇಲಿತ್ತು. ಇದೀಗ ಸಿಬಿಐ ತನಿಖೆಯಲ್ಲಿ ಈ ಆರೋಪ ದೃಢವಾಗಿರುವ ಹಿನ್ನೆಲೆಯಲ್ಲಿ ಮತ್ತು ಜನರ ದಿಕ್ಕು ತಪ್ಪಿಸಿ ಕಂಪೆನಿಯಿಂದ ಕೋಟ್ಯಾಂತರ ರೂ. ಪಡೆದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ರೋಷನ್ ಬೇಗ್ ಅವರಿಗೆ ಸೇರಿದ ಚರಾಸ್ತಿ ಜಫ್ತಿ ಮಾಡುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಸರ್ಕಾರದ ಅಧಿಸೂಚನೆ ಹಿನ್ನೆಲೆಯಲ್ಲಿಈ ಪ್ರಕರಣದ ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಗಳು ಬೇಗ್ ಗೆ ಸೇರಿದ ನಾಲ್ಕು ಕಾರುಗಳನ್ನು ಜಫ್ತಿ ಮಾಡಿದ್ದಾರೆ.