ಬೆಂಗಳೂರು, ಏ 04 (DaijiworldNews/DB): ಪಕ್ಷ ಬಲವರ್ಧನೆ ಮತ್ತು ಮುಂದಿನ ಚುನಾವಣೆ ನಿಟ್ಟಿನಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನಮಾನಸಕ್ಕೆ ತಲುಪಿಸಲು ಕಾರ್ಯತಂತ್ರಗಳನ್ನು ರೂಪಿಸುವ ಸಲುವಾಗಿ ರಾಜ್ಯ ಮತ್ತು ರಾಷ್ಟ್ರ ನಾಯಕರನ್ನೊಳಗೊಂಡ ತಂಡವು ಏ. 12ರಿಂದ 24ರವರೆಗೆ ರಾಜ್ಯ ಪ್ರವಾಸ ನಡೆಸಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ತಂಡಗಳಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಾಗುತ್ತಿದೆ. ಎಲ್ಲಾ ವಿಭಾಗ ಕೇಂದ್ರಗಳಲ್ಲಿ ಎರಡು ದಿನಗಳ ಕಾರ್ಯಕ್ರಮ ರೂಪಿಸಿ ಪಕ್ಷ ಬಲವರ್ಧನೆ ಸಂಬಂಧಿಸಿ ಚರ್ಚೆ ನಡೆಸಲಾಗುತ್ತದೆ. ಅಲ್ಲದೆ ಜಿಲ್ಲಾ ಕೇಂದ್ರಗಳಲ್ಲಿ ಕೋರ್ ಕಮಿಟಿ ಸಭೆ ಕರೆದು ಚರ್ಚಿಸಲಾಗುತ್ತದೆ ಎಂದರು.
ಜಿಲ್ಲಾ ಭೇಟಿ ವೇಳೆ ಎಲ್ಲಾ ಜಿಲ್ಲೆಗಳ ಪ್ರಮುಖ ನಾಯಕರೊಂದಿಗೆ ವೈಯಕ್ತಿಕ ಮಾತುಕತೆಗೂ ಆದ್ಯತೆ ನೀಡಲಾಗುತ್ತದೆ. ವಿಭಾಗ ಕೇಂದ್ರಗಳ ಮಂಡಲಗಳ ಬೂತ್ ಅಧ್ಯಕ್ಷರು ಮತ್ತು ಶಕ್ತಿ ಕೇಂದ್ರದ ಪ್ರಮುಖ ನಾಯಕರ ಜೊತೆ ಸಮಾವೇಶಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದವರು ತಿಳಿಸಿದರು.