ಜಮ್ಮು , ಏ 04 (DaijiworldNews/MS): ಇತ್ತೀಚಿಗೆ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದು ಬೀಗುತ್ತಿರುವ ಆಮ್ ಆದ್ಮಿ ಪಕ್ಷ (ಎಎಪಿ) ಈಗ ಜಮ್ಮು ಮತ್ತು ಕಾಶ್ಮೀರದ ಮೇಲೆ ಕಣ್ಣಿಟ್ಟಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಈ ವಲಯದಲ್ಲಿ ಪಕ್ಷವನ್ನು ಬಲಪಡಿಸಲು ಮುಂದಾಗಿದ್ದಾರೆ.
ಸುಮಾರು 10 ಜಿಲ್ಲೆಗಳಲ್ಲಿ ವ್ಯಾಪಿಸಿರುವ ಜಮ್ಮು ಪ್ರದೇಶದ ಮೇಲೆ ಎಎಪಿ ಕೇಂದ್ರೀಕರಿಸಿದೆ,.ಇದು ಸುಮಾರು 10 ಜಿಲ್ಲೆಗಳಲ್ಲಿ ವ್ಯಾಪಿಸಿದ್ದು ಕ್ಷೇತ್ರ ಪುನರ್ ರಚನೆ ನಂತರ 90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ಅಸೆಂಬ್ಲಿಯಲ್ಲಿ 43 ವಿಧಾನಸಭಾ ಸ್ಥಾನಗಳು ಇರಲಿವೆ.
ಜಮ್ಮು , ಸಾಂಬಾ, ಕಥುವಾ, ಉದ್ದಮ್ ಪುರ್ ಮತ್ತು ರಿಯಾಸಿಯಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಾಗಿದ್ದು, ಪಿರ್ ಪಂಚಲ್ ವಲಯದ ಪೊಂಚ್, ರಾಜೌರಿ, ಚೆನಾಬ್ ಕಣಿವೆಯ ದೊಡಾ, ಕಿಶ್ತ್ವಾರ್ ಮತ್ತು ರಾಂಬನ್ ಜಿಲ್ಲೆಗಳತ್ತ ಎಎಪಿ ಗಮನವನ್ನು ಹೆಚ್ಚಿಸುತ್ತಿದೆ. ಕಾಂಗ್ರೆಸ್ ಇಲ್ಲಿ ದುರ್ಬಲಗೊಂಡಿದ್ದು ಅದನ್ನು ಆಕ್ರಮಿಸಿಕೊಳ್ಳಲು ಎಎಪಿ ಕಣ್ಣಿಟ್ಟಿದೆ
ಜಮ್ಮು ವಲಯದಲ್ಲಿ ಬಿಜೆಪಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುವುದು ಎಎಪಿ ಉದ್ದೇಶವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ಇತ್ತೀಚಿಗೆ ದೊಡಾ ಜಿಲ್ಲೆಯಲ್ಲಿ ಎಎಪಿ ಬೃಹತ್ ರೋಡ್ ಶೋ ನಡೆಸಿತು.ಇದರ ನೇತೃತ್ವವನ್ನು 2020ರಲ್ಲಿ ನಡೆದ ದೊಡಾ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಗೆದಿದ್ದ ಎಎಪಿ ಮುಖಂಡ ಮೆಹ್ರಾಜ್ ಮಲಿಕ್ ವಹಿಸಿದ್ದರು. " ಪ್ರತಿ ಕ್ಷೇತ್ರದಲ್ಲಿ ಸಾವಿರಾರು ಸಕ್ರಿಯ ಸದಸ್ಯರನ್ನು ಪಡೆದಿದ್ದೇವೆ. ಮುಂದಿನ ದಿನಗಳಲ್ಲಿ ಈ ವಲಯದಲ್ಲಿ ಎಎಪಿ ಜನಪ್ರಿಯತೆ ಹೆಚ್ಚಾಗಲಿದೆ" ಎಂದು ಜಮ್ಮು-ಕಾಶ್ಮೀರ ಎಎಪಿ ಸಂಚಾಲಕ ಫಾರೂಖ್ ಅಹ್ಮದ್ ಬಾಂಡೆ ಹೇಳಿದ್ದಾರೆ.