ಪಾಟ್ನಾ, ಏ 03 (DaijiworldNews/DB): ಸಂಸದ ಚಿರಾಗ್ ಪಾಸ್ವಾನ್ ರನ್ನು ಬಂಗಲೆಯಿಂದ ತೆರವು ಮಾಡುವ ಮೂಲಕ ಬಿಜೆಪಿಯು ಹನುಮಂತನ ಮನೆಗೇ ಬೆಂಕಿ ಹಚ್ಚುವ ಕೆಲಸ ಮಾಡಿದೆ ಎಂದು ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಬಿಜೆಪಿ ವಿರುದ್ದ ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ದೆಹಲಿಯ 12 ಜನಪಥ್ ರಸ್ತೆಯಲ್ಲಿ ತಮ್ಮ ತಂದೆ ರಾಮ್ ವಿಲಾಸ್ ಪಾಸ್ವಾನ್ ರಿಗೆ ನೀಡಿದ ಬಂಗಲೆಯಲ್ಲಿ ಚಿರಾಗ್ ವಾಸವಾಗಿದ್ದರು. ಆದರೆ, ಕಳೆದ ಬುಧವಾರ ಅವರನ್ನು ತೆರವು ಮಾಡಲಾಗಿದೆ. ಕೊನೆವರೆಗೂ ಬಿಜೆಪಿಯೊಂದಿಗೆ ನಿಂತಿದ್ದ ಅವರು ಆ ಪಕ್ಷಕ್ಕೆ ಹನುಮಂತನಂತೆಯೇ ಇದ್ದರು. ಆದರೆ ಇದೀಗ ಏಕಾಏಕಿ ತೆರವು ಮಾಡಿರುವ ಬಿಜೆಪಿಯ ಕ್ರಮ ಸರಿಯಲ್ಲ ಎಂದು ದೂಷಿಸಿದ್ದಾರೆ.
ಯುಪಿಎ ಮತ್ತು ಎನ್ ಡಿ ಎ ಸರ್ಕಾರಗಳಲ್ಲಿ ಸಚಿವರಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ನಿಧನದ ನಂತರ ಅವರ ಪುತ್ರ ಮತ್ತು ಸಂಸದ ಚಿರಾಗ್ ಪಾಸ್ವಾನ್ ತಂದೆಗೆ ನೀಡಿದ್ದ ಬಂಗಲೆಯಲ್ಲಿ ವಾಸವಾಗಿದ್ದರು. ಬಂಗಲೆಯು ಎಲ್ಜೆಪಿಯ ರಾಜಕೀಯ ಚಟುವಟಿಕೆಗಳಿಗೂ ಬಳಕೆಯಾಗುತ್ತಿತ್ತು. ಆದರೆ ಅವರ ನಿಧನಾನಂತರ ಕಳೆದ ವರ್ಷ ಕೇಂದ್ರ ರೈಲ್ವೇ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಈ ಬಂಗಲೆಯನ್ನು ನೀಡಲಾಗಿತ್ತಾದರೂ ಚಿರಾಗ್ ಪಾಸ್ವಾನ್ ಬಂಗಲೆಯಿಂದ ಹೊರ ಹೋಗಿರಲಿಲ್ಲ. ಅಲ್ಲದೆ, ಬಂಗಲೆ ತೆರವು ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯವು ವಜಾಗೊಳಿಸಿದೆ. ಹೀಗಾಗಿ ಈ ತೆರವು ಪ್ರಕ್ರಿಯೆ ನಡೆದಿದೆ ಎನ್ನಲಾಗುತ್ತಿದೆ.