ಹುಬ್ಬಳ್ಳಿ, ಏ 03 (DaijiworldNews/DB): ಬಿಜೆಪಿ ಸೇರ್ಪಡೆ ವಿಚಾರವಾಗಿ ಚರ್ಚೆ ನಡೆಸಲಾಗಿದೆ. ಮುಂಬರುವ ವಿಧಾನ ಪರಿಷತ್ ಚುನಾವಣೆ ವೇಳೆಗೆ ಬಿಜೆಪಿ ಸೇರ್ಪಡೆ ಬಹುತೇಕ ಖಚಿತವಾಗಲಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಪ್ರಸ್ತುತ ತಾನು ಸಭಾಪತಿಯಾಗಿದ್ದೇನೆ. ಈ ಸ್ಥಾನದಲ್ಲಿರುವಾಗ ಅಧಿಕೃತ ಘೋಷಣೆ ಅಸಾಧ್ಯ. ಆದಾಗ್ಯೂ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆದಿದ್ದು, ಎಲ್ಲರಿಂದಲೂ ಏಕಭಿಪ್ರಾಯ ವ್ಯಕ್ತವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಒಮ್ಮತ ಸೂಚಿಸಿದ್ದಾರೆ. ಹೀಗಾಗಿ ಮುಂದಿನ ಚುನಾವಣೆ ವೇಳೆಗೆ ಬಿಜೆಪಿ ಸೇರ್ಪಡೆ ಖಚಿತವಾಗಲಿದೆ ಎಂದರು.
ಸೇರ್ಪಡೆ ಪ್ರಕ್ರಿಯೆಯು ಚುನಾವಣೆ ಘೋಷಣೆಯಾದ ಬಳಿಕವೇ ನಡೆಯಲಿದೆ. ಈ ಕುರಿತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೂ ಮಾತನಾಡಲಾಗಿದೆ ಎಂದವರು ತಿಳಿಸಿದರು.