ಬೆಂಗಳೂರು, ಏ 03 (DaijiworldNews/HR): ಬೆಲೆ ಏರಿಕೆ ಬಗ್ಗೆ ಜನಸಾಮಾನ್ಯರ ಗಮನ ಬೇರೆಡೆ ಸೆಳೆಯಲು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಬಿಜೆಪಿ ನಾಯಕರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಹಿಜಾಬ್, ಟಿಪ್ಪು ವಿಚಾರ, ಭಗವದ್ಗೀತೆ, ಹಲಾಲ್ ಹೀಗೆ ಸೂಕ್ಷ್ಮ ವಿಚಾರಗಳ ವಿವಾದ ಸೃಷ್ಟಿಸಿ ಬೆಲೆ ಏರಿಕೆ ಬಗ್ಗೆ ಧ್ವನಿ ಎತ್ತಬಾರದೆಂಬುದು ಬಿಜೆಪಿಯವರ ದುರುದ್ದೇಶವಾಗಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಹಿಜಾಬ್, ಮತಾಂತರ, ದೇವಸ್ಥಾನಗಳ ಬಳಿ ಮುಸ್ಲೀಂ ವ್ಯಾಪಾರ ನಿರ್ಬಂಧ, ಗೋಹತ್ಯೆ ನಿಷೇಧ ಇವುಗಳನ್ನೆಲ್ಲ ತಂದು ಬೆಲೆ ಏರಿಕೆ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ಅಡುಗೆ ಅನಿಲ, ರಸಗೊಬ್ಬರ ಸೇರಿದಂತೆ ಪ್ರತಿಯೊಂದು ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಜನ ಸಾಮಾನ್ಯರ ಬದುಕು ದುಸ್ತರವಾಗಿದೆ ಇಂತಹ ಸ್ಥಿತಿಯಲ್ಲಿ ಹಲಾಲ್ ವಿವಾದ ಸೃಷ್ಟಿಸುವ ಅಗತ್ಯವೇನು? ಎಂದು ಪ್ರಶ್ನಿಸಿದ್ದಾರೆ.