ಬೆಂಗಳೂರು, ಏ 03 (DaijiworldNews/DB): ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಜನರ ಮೇಲೆ ಗದಾಪ್ರಹಾರ ಮಾಡುತ್ತಿದೆ. ಇದು ತೆರಿಗೆ ಹೆಸರಲ್ಲಿ ಸರ್ಕಾರದಿಂದ ನಡೆಯುತ್ತಿರುವ ಲೂಟಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಕಳೆದ 11 ದಿನಗಳಿಂದ ನಿರಂತರವಾಗಿ ಇಂಧನಗಳ ಬೆಲೆ ಏರಿಕೆ ಮಾಡಲಾಗುತ್ತಿದೆ. ರೈತರು, ಬಡವರು, ಮಧ್ಯಮ ವರ್ಗದವರು ಮತ್ತು ವ್ಯಾಪಾರಸ್ಥರ ಮೇಲೆ ತೆರಿಗೆ ಹೆಸರಲ್ಲಿ ಸರ್ಕಾರ ಮಾಡುತ್ತಿರುವ ಲೂಟಿಯಾಗಿದೆ ಎಂದರು.
ಆದಾಯ ದುಪ್ಪಟ್ಟು ಮಾಡುತ್ತೇವೆಂದು ರೈತರಿಗೆ ಭರವಸೆ ನೀಡಿದವರು ವೆಚ್ಚವನ್ನು ಮಾತ್ರ ದುಪ್ಪಟ್ಟುಗೊಳಿಸುತ್ತಿದ್ದಾರೆ. ರಾಗಿ, ಭತ್ತ, ಜೋಳ, ತೊಗರಿಗೆ ಬೆಂಬಲ ಬೆಲೆಯೇ ಇಲ್ಲದಾಗಿದೆ. ಕೃಷಿ ಕ್ಷೇತ್ರದ ಮೇಲೂ ತೆರಿಗೆ ವಿಧಿಸಲಾಗಿದೆ. ಕಳೆದ ಎಂಟು ವರ್ಷದಲ್ಲಿ ಪೆಟ್ರೋಲ್ ಮೇಲೆ 18.70 ರೂ. ಹಾಗೂ ಡೀಸೆಲ್ ಮೇಲೆ 18.34 ರೂ. ಅಬಕಾರಿ ಸುಂಕ ಹೆಚ್ಚುವರಿ ಹಣ ವಿಧಿಸಲಾಗಿದೆ. ಮೋದಿಯವರ ದುರಾಸೆಯಿಂದ ಇಂಧನ ದರ ಹೆಚ್ಚಾಗಿದೆಯೇ ಹೊರತು ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಕೆ ಕಾರಣವಲ್ಲ ಎಂದವರು ವಾಗ್ದಾಳಿ ನಡೆಸಿದರು.
ಕೋವಿಡ್ ಸಂಕಷ್ಟದ ನಡುವೆಯೂ ಜನರಿಂದ ಸುಲಿಗೆ ಮಾಡುವುದನ್ನು ಮೋದಿ ಸರ್ಕಾರ ನಿಲ್ಲಿಸಿಲ್ಲ. ಯುಪಿಎ ಅವಧಿಯಲ್ಲಿದ್ದ ಬೆಲೆಗಿಂತ ಈಗ ಕಚ್ಚಾತೈಲದ ಬೆಲೆ ತುಂಬಾ ಕಡಿಮೆ ಇದೆ. ಹಾಗಿದ್ದರೂ, ಇಂಧನ ದರದಲ್ಲಿ ಮಾತ್ರ ನಿರಂತರ ಏರಿಕೆ ಕಾಣುತ್ತಿದೆ. ಅಡುಗೆ ಅನಿಲದ ವಿಚಾರದಲ್ಲಿಯೂ ಇದೇ ರೀತಿ ಗದಾಪ್ರಹಾರ ನಡೆಯುತ್ತಿದೆ ಎಂದು ಇದೇ ವೇಳೆ ಅವರು ತಿಳಿಸಿದರು.
ಇಂಧನಗಳು ಮತ್ತು ಅಡುಗೆ ಅನಿಲ ಬೆಲೆ ಏರಿಕೆ ವಿರುದ್ಧ ನಾವು ರಾಜ್ಯಾದ್ಯಂತ ಹೋರಾಟ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.