ಬೆಂಗಳೂರು, ಏ 03 (DaijiworldNews/DB): ಪಬ್ ಜಿ ಆಟಕ್ಕಾಗಿ 12 ವರ್ಷದ ಬಾಲಕನೋರ್ವ ರೈಲ್ವೇ ಪೊಲೀಸರಿಗೆ ಕರೆ ಮಾಡಿ ಯಲಹಂಕ ನಿಲ್ದಾಣದಲ್ಲಿ ಬಾಂಬ್ ಇರುವುದಾಗಿ ಸುಳ್ಳು ಮಾಹಿತಿ ನೀಡಿದ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.
ರೈಲ್ವೇ ಪೊಲೀಸ್ ಸಹಾಯವಾಣಿಗೆ ಮಾರ್ಚ್ 30 ರಂದು ಆತ ಕರೆ ಮಾಡಿದ್ದು, ಯಲಹಂಕ ರೈಲು ನಿಲ್ದಾಣದಲ್ಲಿ ಬಾಂಬ್ ಇದೆ ಎಂದಿದ್ದಾನೆ. ಇದರಿಂದ ಆತಂಕಗೊಂಡ ಪೊಲೀಸರು ಪ್ರಯಾಣಿಕರನ್ನು ಹೊರಗೆ ಕಳುಹಿಸಿ ಪರಿಶೀಲಿಸಿದ್ದಾರೆ. ಅಲ್ಲದೆ, ಯಾವುದೇ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ರೈಲ್ವೇ ನಿಲ್ದಾಣಕ್ಕೆ ಸುಮಾರು 90 ನಿಮಿಷ ರೈಲ್ವೇ ನಿಲ್ದಾಣಕ್ಕೆ ಪ್ರಯಾಣಿಕರ ಪ್ರವೇಶವನ್ನೂ ನಿರ್ಬಂಧಿಸಲಾಗಿತ್ತು.
ರೈಲ್ವೆ ಸಂರಕ್ಷಣಾ ಪಡೆ (ಆರ್ಪಿಎಫ್), ವಿಧ್ವಂಸಕ ನಿಗ್ರಹ ದಳ ಮತ್ತು ಶ್ವಾನದಳವನ್ನು ಒಳಗೊಂಡ ಎಲ್ಲಾ ತಂಡಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇಡೀ ನಿಲ್ದಾಣವನ್ನು ಪರಿಶೀಲಿಸಿದ ನಂತರ ಇದೊಂದು ಹುಸಿ ಕರೆ ಎಂಬುದು ಗೊತ್ತಾಗಿದೆ. ಬಳಿಕ ಕರೆ ಬಂದ ಸಂಖ್ಯೆಗೆ ವಾಪಾಸ್ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಅದೇ ದಿನ ಕಾಚೇಗೌಡ ಎಕ್ಸ್ ಪ್ರೆಸ್ ನಲ್ಲಿ ಬಾಲಕನ ಪಬ್ ಜಿ ಗೆಳೆಯ ಪ್ರಯಾಣ ಬೆಳೆಸಬೇಕಿತ್ತು. ಆತನ ಪ್ರಯಾಣದಿಂದ ಈತನ ಆಟಕ್ಕೆ ಅಡ್ಡಿಯುಂಟಾಗುತ್ತದೆ ಎಂಬ ಕಾರಣಕ್ಕಾಗಿ ಈತ ಹುಸಿ ಬಾಂಬ್ ಕರೆ ಮಾಡಿ ಆತನ ಪ್ರಯಾಣ ನಿಲ್ಲಿಸಲು ಯೋಜಿಸಿದ್ದ ಎಂಬುದು ಬಳಿಕ ತಿಳಿದು ಬಂದಿತ್ತು. ಆದರೆ, ಬಾಲಕನ ಆಟ ಪ್ರಯಾಣಿಕರು ಮತ್ತು ಪೊಲೀಸರನ್ನು ಸುಸ್ತು ಹೊಡೆಸಿದೆ. ಕರೆ ಮಾಡಿದ ಬಾಲಕ ಯಲಹಂಕದ ವಿನಾಯಕ ನಗರದ ನಿವಾಸಿಯಾಗಿದ್ದು, ಪೋಷಕರ ಮೊಬೈಲ್ ನಿಂದಲೇ ಕರೆ ಮಾಡಿದ್ದ.
ಈ ಕುರಿತು ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೇ ಮ್ಯಾನೇಜರ್ ಶ್ಯಾಮ್ ಸಿಂಗ್, ಕರೆ ಬಂದ ನಂತರ ಇಡೀ ರೈಲ್ವೇ ನಿಲ್ದಾಣಕ್ಕೆ ಪ್ರಯಾಣಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಪರಿಶೀಲನೆ ಪೂರ್ಣಗೊಂಡ ಬಳಿಕ ರಾಜ್ಯ ಪೊಲೀಸ್ ಬಾಂಬ್ ನಿಷ್ಕ್ರಿಯ ದಳ ಅನುಮತಿ ನೀಡಿದ ನಂತರ ನಿಲ್ದಾಣದಲ್ಲಿ ಕಾರ್ಯಾಚರಣೆ ಪುನರಾರಂಭಿಸಲಾಗುತ್ತದೆ. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸಂಪೂರ್ಣವಾಗಿ ನಿಲ್ದಾಣವನ್ನು ಮುಚ್ಚಲಾಗಿತ್ತು ಎಂದು ತಿಳಿಸಿದ್ದಾರೆ. ಬಾಲಕ ಅಪ್ರಾಪ್ತನಾಗಿರುವ ಹಿನ್ನೆಲೆಯಲ್ಲಿ ಆತನ ವಿರುದ್ದ ಯಾವುದೇ ಆರೋಪ ಮಾಡದೆ, ಆತನಿಗೆ ತಿಳಿ ಹೇಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.