ಬೆಂಗಳೂರು, ಏ 02 (DaijiworldNews/DB): ಸಾಂದರ್ಭಿಕ ಕೂಸು ಹಿಂದುತ್ವದ ಬಗ್ಗೆ ಹಿಂದೂ ಸಂಘಟನೆಗಳಿಗೆ ಪಾಠ ಮಾಡುವ ಅವಶ್ಯಕತೆ ಇಲ್ಲ. ಅವರಿಂದ ನಾವು ಪಾಠ ಕಲಿಯಬೇಕಾಗಿಯೂ ಇಲ್ಲ ಎಂದು ಟ್ವೀಟ್ ಮೂಲಕ ಬಿಜೆಪಿ ರಾಜ್ಯ ಘಟಕ ಎಚ್ .ಡಿ. ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದೆ.
ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಓತಿಕ್ಯಾತಕ್ಕೆ ಬೇಲಿಯ ಗೂಟ ಸಾಕ್ಷಿ ಎಂಬ ಗಾದೆ ಮಾತನ್ನು ಎಚ್ ಡಿಕೆಯವರು ನೆನಪಿಸಿಕೊಳ್ಳಬೇಕು. ಅಧಿಕಾರಕ್ಕಾಗಿ ಹಪಹಪಿಸುವ ಅವರು ಕೇವಲ ಅವರ ಕುಟುಂಬದ ಉನ್ನತಿಗಾಗಿ ಕೆಲಸ ಮಾಡುತ್ತಾರೆ. ಆದರೆ ಹಿಂದೂ ಸಂಘಟನೆಗಳು ಸಮಾಜದ ಕಣ್ಣೀರೊರೆಸುವ ಕೆಲಸ ಮಾಡುತ್ತಿವೆ. ಕುಮಾರಸ್ವಾಮಿಯವರು ಲಕ್ಕಿಡಿಪ್ ಸಿಎಂ. ಅವರ ಜಾತ್ಯಾತೀತ ನಡೆಯೆಂಬುದು ಅವಕಾಶವಾದದ ಪರಿಷ್ಕೃತ ರೂಪ ಎಂದು ರಾಜ್ಯ ಬಿಜೆಪಿ ಘಟಕ ವ್ಯಂಗ್ಯವಾಡಿದೆ.
ಕುಮಾರಸ್ವಾಮಿಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ತಮ್ಮ ಮಾತು ದೊಡ್ಡದಾಗುತ್ತಿದೆ ಎಂದು ಗೊತ್ತಾದ ಮೇಲೆ ಕ್ಷಮೆ ಕೇಳುತ್ತಾರೆ. ಮತ ಬ್ಯಾಂಕ್ ಗಟ್ಟಿಯಾಗುವ ವಿಚಾರಕ್ಕೆ ಮಾತ್ರ ಅವರ ಮಾತು ಸೀಮಿತವಾಗಿರುತ್ತದೆ ಎಂದು ಬಿಜೆಪಿ ಹೇಳಿದೆ.