ಅಹಮದಾಬಾದ್, ಏ 02 (DaijiworldNews/MS): ಅಹಮದಾಬಾದ್ನಲ್ಲಿರುವ ಸಬರಮತಿ ಆಶ್ರಮಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಭೇಟಿ ನೀಡಿದ್ದಾರೆ.
ಮುಂಬರುವ ಗುಜರಾತ್ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಆಮ್ ಆದ್ಮಿ ಪಕ್ಷದ ಇಬ್ಬರು ನಾಯಕರು ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಮಹಾತ್ಮ ಗಾಂಧಿಯವರ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದರು.
ಎರಡು ದಿನಗಳ ಅಹಮದಾಬಾದ್ ಪ್ರವಾಸ ಕೈಗೊಂಡಿರುವ ಈ ಇಬ್ಬರು ನಾಯಕರು ಈ ವರ್ಷದ ಡಿಸೆಂಬರ್ನಲ್ಲಿ ನಡೆಯಲಿರುವ ರಾಜ್ಯದ ವಿಧಾನಸಭಾ ಚುನಾವಣೆ ಮೇಲೆ ಹೆಚ್ಚು ಗಮನಹರಿಸಿದ್ದಾರೆ. ಕಳೆದ ವರ್ಷ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷವು ರಾಜ್ಯ ಚುನಾವಣೆಯಲ್ಲಿ ಎಲ್ಲಾ 182 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದರು.
ಆಮ್ ಆದ್ಮಿ ಪಕ್ಷ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಬಿಜೆಪಿಯನ್ನು ಸೋಲಿಸಿತ್ತು. ಅದೇ ಫಲಿತಾಂಶವನ್ನು ಆಪ್ ಪಕ್ಷವು ಗುಜರಾತಿನಲ್ಲಿ ಎದುರು ನೋಡುತ್ತಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರು ಮತ್ತು ದೆಹಲಿ ಮತ್ತು ಪಂಜಾಬ್ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಶನಿವಾರ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. " ಅಹಮದಾಬಾದ್ ನಗರದ ನಿಕೋಲ್ ಮತ್ತು ಬಾಪುನಗರ ಪ್ರದೇಶದಲ್ಲಿ ಸುಮಾರು ಎರಡು ಕಿಲೋಮೀಟರ್ "ತಿರಂಗ ಯಾತ್ರೆ" ನಡೆಸಲಿದ್ದು ರಾಜ್ಯದಾದ್ಯಂತ ಎಲ್ಲಾ ಪ್ರಮುಖ ಪಕ್ಷದ ನಾಯಕರು ಸೇರಿದಂತೆ ಸುಮಾರು 50,000 ಜನರು ಭಾಗವಹಿಸಲಿದ್ದಾರೆ" ಎಂದು ಗುಜರಾತ್ ಎಎಪಿ ಪ್ರಧಾನ ಕಾರ್ಯದರ್ಶಿ ಮನೋಜ್ ಸೊರಥಿಯಾ ಇದಕ್ಕೂ ಮುಂಚೆ ಹೇಳಿದ್ದರು.