ಬೆತಲ್, ಏ 02 (DaijiworldNews/DB): ಮಧ್ಯಪ್ರದೇಶದ ಬೆತಲ್ ನಲ್ಲಿ ಶಿಕ್ಷಕನಿಂದ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಅಪ್ರಾಪ್ತ ಬಾಲಕಿಗೆ ಅಕ್ರಮವಾಗಿ ಗರ್ಭಪಾತ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯೆ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ 16 ರಂದು ಕೋಚಿಂಗ್ ಸೆಂಟರ್ ನ ನಿರ್ವಾಹಕ ಪ್ರಕಾಶ್ ಭೋಜ್ಕರ್ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ವಿಷಯವನ್ನು ಯಾರಲ್ಲೂ ಹೇಳಬಾರದು ಎಂಬುದಾಗಿ ಆರೋಪಿ ವಿದ್ಯಾರ್ಥಿನಿಗೆ ಜೀವ ಬೆದರಿಕೆ ಹಾಕಿದ್ದರಿಂದ ಬಾಲಕಿ ವಿಷಯ ಮುಚ್ಚಿಟ್ಟಿದ್ದಳು. ಆದರೆ ಆಕೆ ಗರ್ಭಿಣಿಯಾದ ಹಿನ್ನೆಲೆಯಲ್ಲಿ ಆರೋಪಿಯ ಪೋಷಕರು ಆಕೆಯನ್ನು ಬೇತಲ್ ನ ಕರುಣಾ ಖಾಸಗಿ ಆಸ್ಪತ್ರೆಗೆ ಕರೆ ತಂದು ಮಾರ್ಚ್ 22 ರಂದು ಗರ್ಭಪಾತ ಮಾಡಿಸಿದ್ದರು.
ಈ ವಿಚಾರ ತಿಳಿದ ಪೊಲೀಸರು ಆಮ್ಲಾ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 376 ರ ಅಡಿಯಲ್ಲಿ ಆರೋಪಿ ಮತ್ತು ಗರ್ಭಪಾತ ಮಾಡಿದ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೆ, ಆರೋಪಿ ಮತ್ತು ಆತನ ಪೋಷಕರಿಬ್ಬರನ್ನು ಬಂಧಿಸಿದ್ದರು. ಇದೀಗ ಗರ್ಭಪಾತ ಮಾಡಿಸಿದ ವೈದ್ಯೆ ವಂದನಾ ಕಾಪ್ಸೆ ಅವರನ್ನೂ ಭ್ರೂಣ ಹತ್ಯೆಯ ಸೆಕ್ಷನ್ 315 ರ ಅಡಿಯಲ್ಲಿ ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.