ಬೆಂಗಳೂರು, ಏ 02 (DaijiworldNews/DB): ಮುಸ್ಲಿಂ ಸಮುದಾಯದ ವಿರುದ್ದ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವವರ ವಿರುದ್ದ ಸ್ವಯಂಪ್ರೇರಿತ ದೂರು ದಾಖಲಿಸಿ ಕಾನೂನು ಕ್ರಮ ಜರಗಿಸುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ತುರ್ತ ವಿಚಾರಣೆಗೆ ಹೈಕೋರ್ಟ್ ನಿರಾಕರಿಸಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಿವಾಸಿ ಮೊಹಮ್ಮದ್ ಖಲೀಲುಲ್ಲಾ ಅವರು ಈ ಕುರಿತು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ಸರ್ಕಾರಕ್ಕೆ ಆದೇಶಿಸಬೇಕು ಎಂದು ಮನವಿ ಮಾಡಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಕೆ.ಎಸ್. ಈಶ್ವರಪ್ಪ, ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಎಂ.ಪಿ. ರೇಣುಕಾಚಾರ್ಯ, ಸಿ.ಟಿ. ರವಿ, ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ರಿಷಿಕುಮಾರ ಸ್ವಾಮೀಜಿ, ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಮತ್ತು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂಬುದಾಗಿ ಅವರು ಅರ್ಜಿಯಲ್ಲಿ ಕೋರಿದ್ದರು.
ಅಲ್ಲದೆ, ಈ ಅರ್ಜಿಯನ್ನು ತುರ್ತು ವಿಚಾರಣೆಗೊಳಪಡಿಸಬೇಕೆಂದು ಅರ್ಜಿದಾರರ ಪರ ವಕೀಲ ರಹ್ಮತುಲ್ಲಾ ಕೊತ್ವಾಲ್ ಶುಕ್ರವಾರ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಮನವಿ ಮಾಡಿದ್ದರು. ಆದರೆ ತುರ್ತು ವಿಚಾರಣೆಯ ಮನವಿಯನ್ನು ನ್ಯಾಯಪೀಠ ತಳ್ಳಿ ಹಾಕಿದ್ದು, ಕ್ರಮ ಪ್ರಕಾರವೇ ವಿಚಾರಣೆ ನಡೆಸುವುದಾಗಿ ತಿಳಿಸಿದೆ.