ಬೆಂಗಳೂರು, ಏ 02 (DaijiworldNews/MS): ಬೆಲೆಯೇರಿಕೆಯ ಬಿಸಿ ಜನರನ್ನು ಸುಡುತ್ತಿದೆ. ದರ ಏರಿಕೆ ಡಬಲ್ ಇಂಜೀನ್ ಸರ್ಕಾರದ ಬಂಪರ್ ಕೊಡುಗೆಯಾಗಿದೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಅವರು, "ಹೋಟೆಲ್ಗಳ ತಿಂಡಿ ತಿನಿಸುಗಳ ದರ ಇಂದಿನಿಂದ ಮತ್ತೆ ಏರಿಕೆಯಾಗಿದೆ. ಅಡುಗೆ ಎಣ್ಣೆ, ವಾಣಿಜ್ಯ ಸಿಲಿಂಡರ್ ಹಾಗೂ ಅಗತ್ಯ ವಸ್ತುಗಳ ಬೆಲೆ ಸತತವಾಗಿ ಏರಿಕೆಯಾದ ಪರಿಣಾಮ ಹೋಟೆಲ್ ಮಾಲೀಕರು ದರ ಏರಿಸುವುದು ಅನಿವಾರ್ಯವಾಗಿದೆ. ಗ್ರಾಹಕರು ಹೊಟ್ಟೆ ತುಂಬಿಸಿಕೊಳ್ಳಬೇಕಾದರೆ ದುಬಾರಿ ದರ ತೆರಲೇಬೇಕು. ದರ ಏರಿಕೆ ಡಬಲ್ ಇಂಜೀನ್ ಸರ್ಕಾರದ ಬಂಪರ್ ಕೊಡುಗೆ" ಎಂದಿದ್ದಾರೆ.
ಅವಿವಾಹಿತರು,ಉದ್ಯೋಗಿಗಳು,ವಲಸಿಗರು,ಕಾರ್ಮಿಕರು ಹಾಗೂ ಅಸಂಖ್ಯಾತ ಬಡವರಿಗೆ ಇಂದಿರಾ ಕ್ಯಾಂಟೀನ್ನಲ್ಲಿ ರಿಯಾಯಿತಿ ದರದಲ್ಲಿ ಊಟ ಸಿಗುತಿತ್ತು. ಈ ಸರ್ಕಾರ ಇಂದಿರಾ ಕ್ಯಾಂಟೀನ್ಗೆ ಅನುದಾನ ಕೂಡ ನಿಲ್ಲಿಸಿದೆ.ಇತ್ತ ಬೆಲೆಯೇರಿಕೆ ನಿಯಂತ್ರಣದ ಬಗ್ಗೆಯೂ ಯಾವುದೇ ಕ್ರಮವಿಲ್ಲ ಇಂದಿರಾ ಕ್ಯಾಂಟೀನ್ಗೆ ಅನುದಾನ ಕೊಡಲು ಈ ಸರ್ಕಾರಕ್ಕೆ ದಾಡಿಯೇನು? ಎಂದು ಕಿಡಿಕಾರಿದ್ದಾರೆ.
ಅಗತ್ಯ ವಸ್ತು,ಅಡುಗೆ ಎಣ್ಣೆ,FMCG ಸೇರಿದಂತೆ ತೈಲದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ.ಜನ ಒಂದೊತ್ತಿನ ಊಟ ತಿನ್ನಲೂ ಖರ್ಚಿನ ಲೆಕ್ಕ ಹಾಕಬೇಕು . ಬಿಜೆಪಿ ನಾಯಕರು ಬೆಲೆಯೇರಿಕೆಯ ಬಗ್ಗೆ ಎಂದಾದರೂ ಮಾತನಾಡಿದ್ದಾರೆಯೇ? ಪೆಟ್ರೋಲ್ ಬೆಲೆ ಲೀಟರ್ಗೆ ಐನೂರಾದರೂ ನಮ್ಮ ಓಟು ಮೋದಿಗೆ ಎನ್ನುವ ಮೂರ್ಖರ ಸಂತೆಯ ಬಿಜೆಪಿಯವರಿಗೆ ಜನರ ಕಷ್ಟ ಗೊತ್ತಿದೆಯೆ?ಎಂದು ಪ್ರಶ್ನಿಸಿದ್ದಾರೆ.
ಬೆಲೆಯೇರಿಕೆಯ ಬಿಸಿ ಜನರನ್ನು ಸುಡುತ್ತಿದೆ. ಕೊಳ್ಳೆ ಹೊಡೆದು ಶ್ರೀಮಂತರಾಗಿರುವ ಬಿಜೆಪಿಯವರಿಗೆ ಬೆಲೆಯೇರಿಕೆಯ ತಾಪ ತಟ್ಟದಿರಬಹುದು. ಆದರೆ ಬಡವರ ಪಾಡೇನು? ಬಿಜೆಪಿಯವರೆ, ಬೆಲೆಯೇರಿಕೆ ಇವತ್ತಿನ ನೈಜ ಸಮಸ್ಯೆ. ಧರ್ಮದ ಆಧಾರದಲ್ಲಿ ಸಮಾಜ ಒಡೆಯುವ ಕೆಲಸ ಬಿಟ್ಟು ಬೆಲೆಯೇರಿಕೆಯ ಬಗ್ಗೆ ಈಗಲಾದರೂ ಬಾಯಿ ಬಿಡಿ. ನಿಮ್ಮ ಪಕ್ಷದ ಬಡವರ ಕಾಳಜಿ ಜನರಿಗೂ ತಿಳಿಯಲಿ ಎಂದು ಸಲಹೆ ನೀಡಿದ್ದಾರೆ.