ತುಮಕೂರು, ಏ 02 (DaijiworldNews/DB): ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಯವರ 115ನೇ ಗುರುವಂದನಾ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶೂ ಧರಿಸಿ ಕುಳಿತ ಭಂಗಿ ಇದೀಗ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ನಾರಾಯಣಸ್ವಾಮಿ, ಯಡಿಯೂರಪ್ಪ, ಸುತ್ತೂರು ಮತ್ತು ಸಿದ್ದಗಂಗಾ ಮಠದ ಸ್ವಾಮೀಜಿಗಳು ವೇದಿಕೆಯಲ್ಲಿದ್ದರು. ಅಮಿತ್ ಶಾ ಅವರು ಸುತ್ತೂರು ಮತ್ತು ಸಿದ್ದಗಂಗಾ ಮಠದ ಸ್ವಾಮೀಜಿಗಳ ಮಧ್ಯದ ಆಸನದಲ್ಲಿ ಕುಳಿತಿದ್ದರು. ಆದರೆ ಸ್ವಾಮೀಜಿಗಳಿಬ್ಬರ ಮಧ್ಯೆ ಅವರು ಶೂ ಧರಿಸಿ, ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಂಡ ಫೋಟೋ ಇದೀಗ ವೈರಲ್ ಆಗಿದ್ದು, ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಮಾತೆತ್ತಿದ್ದರೆ ಹಿಂದೂ ಸಮಾಜದ ಉದ್ದಾರ ಎನ್ನುವ ಬಿಜೆಪಿ ನಾಯಕರಿಗೆ ಸಂಪ್ರದಾಯ, ಶ್ರೀಗಳಿಗೆ ಗೌರವ ಕೊಡುವ ಬಗೆ ಗೊತ್ತಿಲ್ಲವೇ ಎಂದು ಕಾಂಗ್ರೆಸ್ ಮುಖಂಡರು ಟೀಕಿಸುತ್ತಿದ್ದಾರೆ. ಅಲ್ಲದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿದ್ದಗಂಗಾ ಮಠಕ್ಕೆ ಹೋದಾಗ ನಡೆದುಕೊಂಡ ರೀತಿಯ ಬಗ್ಗೆಯೂ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಕಾಂಗ್ರೆಸ್ಸಿಗರು ಶಾ ಅವರನ್ನು ಟೀಕಿಸುತ್ತಿದ್ದಾರೆ.
ಮಠಗಳಿಗೆ ಹೋಗುವಾಗ ಚಪ್ಪಲಿ ತೆಗೆದಿಟ್ಟು ಹೋಗುವುದು ನಾವು ಆ ಸ್ಥಳಕ್ಕೆ ಕೊಡುವ ಗೌರವ. ಪೀಠಾಧಿಪತಿಗಳ ಕಡೆಗೆ ಚಪ್ಪಲಿ ತೋರಿಸಿಕೊಂಡು ಕುಳಿತುಕೊಳ್ಳುವುದು ನಮ್ಮ ಸಂಸ್ಕೃತಿಯಲ್ಲ. ನಿಮ್ಮ ಸ್ಥಾನ ಮಾನ ಇಲ್ಲಿ ಅಪ್ರಸ್ತುತ. ಬಸವಣ್ಣನವರ ಮನೆಯಲ್ಲಿ ಎಲ್ಲರೂ ಒಂದೇ. ನಕಲಿ ನಂಬಿಕೆ ಮತ್ತು ಅಸಲಿ ನಂಬಿಕೆಯ ನಡುವಿನ ವ್ಯತ್ಯಾಸ ಇದೇ ಎಂದು ಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.