ಹಾಸನ, ಏ 01 (DaijiworldNews/DB): ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರ ಹುಟ್ಟೂರಾದ ಹಾಸನದ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಅವರ ಸಾಧನೆಯನ್ನು ಬಿಂಬಿಸುವ ಮ್ಯೂಸಿಯಂ ತಲೆ ಎತ್ತಲಿದೆ.
ರೈತನ ಮಗನಾಗಿ ಜೆಡಿಎಸ್ ಪಕ್ಷ ಕಟ್ಟಿದ ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ವಿವಿಧ ಸ್ಥರದಲ್ಲಿ ಕಾರ್ಯ ನಿರ್ವಹಿಸಿದವರು. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅವರ ಸಾಧನೆ, ಬದುಕು, ಕೊಡುಗೆಯನ್ನು ಮುಂದಿನ ಪೀಳಿಗೆಯೂ ನೆನಪಿಡುವ ಉದ್ದೇಶದಿಂದ ಅವರ ಹುಟ್ಟೂರಿನಲ್ಲಿ ವಸ್ತು ಸಂಗ್ರಹಾಲಯ ಸ್ಥಾಪನೆಗೊಳ್ಳುತ್ತಿದೆ. ಈಗಾಗಲೇ ಮ್ಯೂಸಿಯಂ ನಿರ್ಮಾಣಕ್ಕೆ ಶ್ರೀ ವಿಧುಶೇಖರ ಮಹಾಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿದ್ದಾರೆ.
ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯು ಈಗಾಗಲೇ ಐದು ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ. ಮ್ಯೂಸಿಯಂ ಮೂರು ಅಂತಸ್ತಿನ ಕಟ್ಟಡವನ್ನು ಹೊಂದಲಿದ್ದು, ದೇವೇಗೌಡ ಅವರ ಸಂಪೂರ್ಣ ಜೀವನ-ಸಾಧನೆ ಕುರಿತ ಮಾಹಿತಿ ಅದರಲ್ಲಿರಲಿದೆ. ದೇವೇಗೌಡರ ಪುತ್ರ, ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ. ರೇವಣ್ಣ ಮ್ಯೂಸಿಯಂ ನಿರ್ಮಾಣಕ್ಕೆ ಭೂಮಿಯನ್ನ ಕೊಡುಗೆ ನೀಡಿದ್ದಾರೆ.