ಚಿಕ್ಕಮಗಳೂರು, ಏ 01 (DaijiworldNews/DB): ಶಿವಮೊಗ್ಗದಲ್ಲಿ 2015ರಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಹಿಂದೂ ಕಾರ್ಯಕರ್ತ ವಿಶ್ವನಾಥ್ ಶೆಟ್ಟಿ ಅವರ ಮಗ ಯಶಸ್ ನ ಓದಿನ ಜವಾಬ್ದಾರಿಯನ್ನು ಇತ್ತೀಚೆಗೆ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷನ ಸಹೋದರಿ ವಹಿಸಿಕೊಂಡಿದ್ದಾರೆ.
ಯಶಸ್ ವಾಸವಿರುವ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದ ಆತನ ಅಜ್ಜಿ ಮನೆಗೆ ಭೇಟಿ ನೀಡಿದ ಹರ್ಷ ಸಹೋದರಿ ಅಶ್ವಿನಿ, ಆತನ ಓದಿನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅಲ್ಲದೆ, ಅಜ್ಜಿಯ ಜವಾಬ್ದಾರಿಯನ್ನೂ ವಹಿಸಿಕೊಳ್ಳುತ್ತೇನೆ. ಇತರ ಏನೇ ಸಮಸ್ಯೆ ಇದ್ದರೂ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸಮಸ್ಯೆ ಇದ್ದಾಗ ಕರೆ ಮಾಡಿ ಎಂದೂ ಹೇಳಿದ್ದಾರೆ.
ಯಶಸ್ ಪ್ರಸ್ತುತ ಮೃತ ವಿಶ್ವನಾಥ ಶೆಟ್ಟಿ ಅವರ ಪತ್ನಿಯ ತಾಯಿಯೊಂದಿಗೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಲ್ಲಿ ವಾಸಿಸುತ್ತಿದ್ದು, 8ನೇ ತರಗತಿ ಓದುತ್ತಿದ್ದಾನೆ. 2015ರ ಫೆಬ್ರವರಿ 19ರಂದು ಶಿವಮೊಗ್ಗದಲ್ಲಿ ಪಿ.ಎಫ್.ಐ ಸಮಾವೇಶ ಬಳಿಕ ಗಾಜನೂರು ಸಮೀಪ ವಿಶ್ವನಾಥ್ ಶೆಟ್ಟಿ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಆ ಬಳಿಕ ಸ್ವಲ್ಪ ಸಮಯದ ನಂತರ ಅವರ ಪತ್ನಿಯೂ ಸಾವನ್ನಪ್ಪಿದ್ದರು. ಹೆತ್ತವರನ್ನು ಕಳೆದುಕೊಂಡ ಯಶಸ್ ಅಜ್ಜಿಯ ಜೊತೆ ವಾಸವಿದ್ದಾರೆ.