ಬೆಂಗಳೂರು, ಏ 01 (DaijiworldNews/DB): ಹಿಜಾಬ್ ಮತ್ತು ಹಲಾಲ್ ಮಾಂಸ ವಿಚಾರವಾಗಿ ಮಾತನಾಡಿದರೆ ಜನರು ತಪ್ಪು ತಿಳಿದುಕೊಳ್ಳುತ್ತಾರೆಂಬ ಆತಂಕ ಅನಗತ್ಯ ಎಂದು ಡಿಕೆಶಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಜಾಬ್ ಧಾರ್ಮಿಕ ಸಂಪ್ರದಾಯವಾಗಿ ನೂರಾರು ವರ್ಷಗಳಿಂದ ಇದೆ. ಆ ವಿಚಾರ ಹಿಡಿದುಕೊಂಡು ದುರುದ್ದೇಶದಿಂದ ದೊಡ್ಡದು ಮಾಡುವ ಬದಲು ಸರ್ಕಾರ ವಿವಾದ ಬಗೆ ಹರಿಸಬೇಕಿತ್ತು. ಆದರೆ ಹಾಗೆ ಮಾಡಿಲ್ಲ. ನಾವು ಈ ವಿಚಾರ ಎತ್ತಿದರೆ ಏನಾಗುತ್ತದೆಯೋ ಎಂಬ ಆತಂಕ ಅನಗತ್ಯ. ನಮಗೆ ಯಾವುದೇ ವಿಚಾರದಲ್ಲಿ ಸ್ಪಷ್ಟತೆ ಇದ್ದರೆ ಅದರ ಬಗ್ಗೆ ಮಾತನಾಡಲು ಅಂಜಿಕೆ ಬೇಕಾಗಿಲ್ಲ ಎಂದರು.
ಬಿಜೆಪಿಯವರು ಚುನಾವಣೆಯವರೆಗೂ ಹಿಜಾಬ್, ಹಲಾಲ್ ಮಾಂಸದ ವಿಚಾರವನ್ನೇ ಮುಂದಿಟ್ಟುಕೊಂಡು ಹೋಗುತ್ತಾರೆ. ಆದರೆ ನಾವು ಇದನ್ನು ತಡೆಯುವ ಅಗತ್ಯ ಈ ಸಂದರ್ಭದಲ್ಲಿ ಬಹಳ ಇದೆ ಎಂದು ತಿಳಿಸಿದರು.