ನವದೆಹಲಿ, ಏ 01 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿ ಎನ್ ಐಎ ಗೆ ಇಮೇಲ್ ವೊಂದು ಬಂದಿದ್ದು, ಇದರಿಂದ ಭದ್ರತಾ ಏಜೆನ್ಸಿಗಳು ಭದ್ರತೆಯನ್ನು ಬಿಗುಗೊಳಿಸಿದ್ದಾರೆ.
ಎನ್ ಐ ಎಯ ಮುಂಬಯಿ ಬ್ರಾಂಚ್ ಈ ಈಮೇಲ್ ನ್ನು ಸ್ವೀಕರಿಸಿದ್ದು, ಇತರ ಭದ್ರತಾ ಏಜೆನ್ಸಿಗಳಿಗೆ ಈಮೇಲ್ ನ್ನು ಕಳುಹಿಸಲಾಗಿದೆ. ಮೋದಿ ಹತ್ಯೆಗಾಗಿ ಕನಿಷ್ಠ 20 ಸ್ಲೀಪರ್ ಸೆಲ್ ಗಳನ್ನು ಸಕ್ರಿಯಗೊಳಿಸಲಾಗಿದೆ. ಈ ಸ್ಲೀಪರ್ ಸೆಲ್ ಗಳು 20 ಕೆಜಿ ಆರ್ಡಿಎಕ್ಸ್ ಅನ್ನು ಸಹ ಹೊಂದಿವೆ. ವಿವಿಧ ಭಯೋತ್ಪಾದಕ ಸಂಘಟನೆಗಳು ಇದಕ್ಕಾಗಿ ಸಂಪರ್ಕ ಸಾಧಿಸುತ್ತಿದ್ದು, ಯೋಜನೆ ಕಾರ್ಯಗತಗೊಳಿಸಲು ಕಾಯಲಾಗುತ್ತಿದೆ ಎಂದು ಇಮೇಲ್ ನಲ್ಲಿ ಬರೆದಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಅಲ್ಲದೆ, ಈ ಪಿತೂರಿಯು ಬಯಲಾಗಬಾರದು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಈಮೇಲರ್ ಬರೆದುಕೊಂಡಿದ್ದಾನೆ ಎನ್ನಲಾಗಿದೆ. ಸೈಬರ್ ಭದ್ರತಾ ಏಜೆನ್ಸಿಯು ಇಮೇಲ್ ಸಂದೇಶ ಬಂದ ಐಪಿ ವಿಳಾಸವನ್ನು ಪತ್ತೆ ಹಚ್ಚುತ್ತಿದೆ.