ಚಿಕ್ಕಮಗಳೂರು, ಏ 1 (DaijiworldNews/HR): ಮನೆಯವರು ನಿಗೂಢ ಸ್ಥಳದಲ್ಲಿಟ್ಟಿದ್ದ ಗೆಳತಿಯನ್ನು ಕರೆದುಕೊಂಡು ಬಂದು ಯುವಕನೊಬ್ಬ ದೇವಸ್ಥಾನದಲ್ಲಿ ಮದುವೆಯಾಗಿರುವ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ.
ಯೋಗಾನಂದ್ ಮತ್ತು ಚಂದನ ಇಬ್ಬರು ಕಡೂರು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿರುವಾಗ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಕಳೆದ ಎರಡು ವರ್ಷದ ಹಿಂದೆ ಯೋಗನಾಂದ್ ಪದವಿ ಮುಗಿಸಿಕೊಂಡು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡ್ತಿದ್ದು, ಚಂದನ ಕಾಲೇಜಿನಲ್ಲಿ ಫೈನಲ್ ಇಯರ್ ಬಿಕಾಂನಲ್ಲಿ ಚಂದನ ಓದುತ್ತಿದ್ದಾಳೆ.
ಇವರಿಬ್ಬರ ಪ್ರೀತಿಯ ವಿಚಾರ ಹುಡುಗಿಯ ಮನೆಯವರಿಗೆ ತಿಳಿದಿದ್ದು, ಅಷ್ಟರಾಗಲೇ ಬೇರೊಬ್ಬ ಹುಡುಗನ ಜೊತೆ ಮದುವೆ ಮಾಡಲು ಸಿದ್ದತೆ ನಡೆಸಿ ಹುಡುಗಿಯನ್ನ ನಿಗೂಢವಾದ ಸ್ಥಳದಲ್ಲಿ ಇಟ್ಟಿದ್ದು, ಆ ಸ್ಥಳಕ್ಕೆ ಹೋಗಿ ತನ್ನ ಗೆಳತಿಯನ್ನು ಕರೆದುಕೊಂಡು ಬಂದಿರುವ ಯೋಗನಾಂದ್ ದೇವಸ್ಥಾನದಲ್ಲಿ ಮದ್ವೆಯಾಗಿದ್ದಾನೆ.
ಇನ್ನು ಇವರಿಬ್ಬರು ಒಂದಾಗಿರೋ ವಿಚಾರ ಕೇಳಿ ಹುಡುಗಿ ಮನೆಯವರು ಜೋಡಿಯ ಹುಡುಕಾಟ ನಡೆಸಿದ್ದಾರೆ. ಜೊತೆಗೆ ವಧು-ವರರಿಗೆ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಹೊಸದಾಗಿ ದಾಂಪತ್ಯಕ್ಕೆ ಕಾಲಿಟ್ಟಿರೋ ಜೋಡಿ ಆರೋಪಿಸಿದ್ದಾರೆ.
ನಮಗೆ ತರಾತುರಿಯಲ್ಲಿ ಮದ್ವೆಯಾಗುವ ಆಸೆ ಇರಲಿಲ್ಲ, ಆದರೆ ಮನೆಯವರ ವಿರೋಧ, ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಅವಸರದಲ್ಲಿ ಮದ್ವೆಯಾಗಬೇಕಾಯ್ತು ಅಂತಾ ಈ ಜೋಡಿ ಹೇಳಿದೆ.